ಶನಿವಾರಸಂತೆ, ಅ. 19: ಶನಿವಾರಸಂತೆ ನಾಡಕಚೇರಿಗೆ ಸೇರಿದ ಪಕ್ಕದ ಹಳೆಯ ಪಾಳುಬಿದ್ದ ಕ್ವಾರ್ಟಸ್ ಮುಂಭಾಗ ಕಣಜದ ಹುಳುಗಳು ಗೂಡು ಕಟ್ಟಿಕೊಂಡಿವೆ. ಇದರಿಂದ ಸಾರ್ವಜನಿಕರಿಗೆ ಅಪಾಯವಿದೆ. ಸುಮಾರು 15 ವರ್ಷಗಳ ಹಿಂದೆ ಶನಿವಾರಸಂತೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ಕ್ವಾರ್ಟಸ್ ಇದಾಗಿತ್ತು. ಅಂದಿನಿಂದ ಈ ಕ್ವಾರ್ಟಸ್‍ನ್ನು ನಾಡಕಚೇರಿಯವರು ಉಪಯೋಗಿಸದೆ ಹಾಳು ಬಿದ್ದ ಮನೆಯಾಗಿದೆ. ಸುತ್ತಮುತ್ತ ಕಾಡು ಬೆಳೆದು ಹತ್ತಿರ ಹೋಗಲು ಭಯಪಡಬೇಕಾಗಿದೆ. ಇದೀಗ ಈ ಕ್ವಾರ್ಟಸ್‍ನ ಮುಂಭಾಗ ಎದ್ದು ಕಾಣುವಂತೆ ಕಣಜದ ಹುಳಗಳು ಗೂಡು ಕಟ್ಟಿಕೊಂಡಿವೆ. ಪಕ್ಕದಲ್ಲೇ ಇರುವ ನಾಡಕಚೇರಿಗೆ ದಿನನಿತ್ಯ ನೂರಾರು ಸಾರ್ವಜನಿಕರು ಬಂದು ಹೋಗುತ್ತಾರೆ. ಪಕ್ಕದಲ್ಲೇ ಬಿದುರೂರಿಗೆ ಹೋಗುವ ರಸ್ತೆ ಇದೆ. ಮನೆಗಳಿವೆ, ಜನ ತಿರುಗಾಡುತ್ತಾರೆ. ಆದರೆ ನಾಡಕಚೇರಿಯವರು ಕಣಜದ ಹುಳುಗಳ ಗೂಡನ್ನು ತೆಗೆಸದೆ ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ಮೌನವಾಗಿರುವದು. ಇಲ್ಲಿ ವಾಸವಿರುವವರು, ಸಾರ್ವಜನಿಕರು ಭಯದಿಂದ ಓಡಾಡುವಂತಾಗಿದೆ. - ನರೇಶ್.