ಮಡಿಕೇರಿ, ಅ. 18: ನಾಪೋಕ್ಲು -ಭಾಗಮಂಡಲ ನಡುವೆ ಹೆದ್ದಾರಿಯ ವಿಸ್ತರಣೆ ಸಲುವಾಗಿ; ರಸ್ತೆ ಬದಿಯಿರುವ ಮೆದು ಮರಗಳನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಿ; ಸ್ಥಳದಲ್ಲೇ ಹರಾಜು ಮೂಲಕ ಮಾರಾಟಗೊಳಿಸ ಲಾಗುತ್ತಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೆ ಈ ರೀತಿಯಲ್ಲಿ ಮರಗಳ ಮಾರಾಟ ಬಾಬ್ತು ರೂ. 1.26 ಲಕ್ಷ ಮೊತ್ತ ಅರಣ್ಯ ಇಲಾಖೆಗೆ ಸಂದಾಯವಾಗಿದೆ ಎಂದು ತಿಳಿಸಿದ್ದಾರೆ.
ತಾ. 16ರ ‘ಶಕ್ತಿ’ಯಲ್ಲಿ ‘ಈ ಲಾರಿ ಬಿಟ್ಟಿದ್ದು ಹೀಗೆ...’ ಎಂಬ ಶಿರೋ ನಾಮೆಯಡಿ ಪ್ರಕಟ ಗೊಂಡಿರುವ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಕಕ್ಕಬ್ಬೆ ಉಪ ವಲಯ ಅಧಿಕಾರಿ ಎಂ.ಬಿ. ಸುರೇಶ್ ಹಾಗೂ ಭಾಗಮಂಡಲ ವಲಯ ಅಧಿಕಾರಿ ಮಂಜುನಾಥ ನಾಯಕ್ ಅವರುಗಳು; ಮಡಿಕೇರಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾರ್ಗದರ್ಶನದಲ್ಲಿ ಹೆದ್ದಾರಿ ಬದಿ ಮರಗಳನ್ನು ತೆರವುಗೊಳಿಸಿ; ಮಕ್ಕಂದೂರುವಿನ ಗುತ್ತಿಗೆದಾರ ಬಾಲನ್ ಎಂಬವರಿಗೆ ಇಲಾಖೆ ಯಿಂದ ಮಾರಾಟಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಹುಣಸೂರು ಮುಖಾಂತರ ಭಾಗಮಂಡಲಕ್ಕೆ ರಾಜ್ಯ ಹೆದ್ದಾರಿ ವಿಸ್ತರಣೆ ಸಂಬಂಧ; ಸರಕಾರದ ನಿರ್ದೇಶನದಂತೆ ರಸ್ತೆ ಬದಿ ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸಿ; ಸ್ಥಳದಲ್ಲೇ ಮಾರಾಟ ನಡೆಸುತ್ತಿರು ವದಾಗಿ ತಿಳಿಸಿರುವ ಅಧಿಕಾರಿಗಳು; ಭಾಗಮಂಡಲ - ಕರಿಕೆ ಮಾರ್ಗ ದಲ್ಲಿಯೂ ಅಂತಹ ಮರ ಗಳನ್ನು ಇಲಾಖೆಯಿಂದ ತೆರವು ಗೊಳಿಸಿ ನೇರ ಮಾರಾಟ ನಡೆಸುತ್ತಿ ರುವದಾಗಿ ‘ಶಕ್ತಿ’ಯೊಂದಿಗೆ ವಿವರಿಸಿದ್ದಾರೆ.
ಉತ್ತಮ ಮರ ಡಿಪೋಗೆ : ಈ ರೀತಿ ಹೆದ್ದಾರಿ ಬದಿಯಲ್ಲಿ ಲಭ್ಯವಿರುವ ಉತ್ತಮ ಜಾತಿ ಮರಗಳನ್ನು; ನೇರವಾಗಿ ಮಾರಾಟಗೊಳಿಸದೆ ಇಲಾಖೆಯ ಗೋದಾಮುವಿಗೆ ಸಾಗಾಟಗೊಳಿಸಲಾಗುತ್ತಿದ್ದು, ಅಕ್ರಮ ಮರಗಳ ದಂಧೆ ತಮ್ಮಗಳ ಅರಿವಿಗೆ ಬಂದಿಲ್ಲವೆಂದು ಸಮಜಾಯಿಷಿಕೆ ನೀಡಿದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮೇಲಿಂದ ಮೇಲೆ ಹೆದ್ದಾರಿ ಬದಿ ಮರಗಳ ತೆರವಿಗೆ ಸಲಹೆ ಮಾಡಿರುವ ಮೇರೆಗೆ ತಾವು ಕ್ರಮ ತೆಗೆದು ಕೊಂಡಿರುವದಾಗಿಯೂ ಮಂಜುನಾಥ ನಾಯಕ್ ಹಾಗೂ ಸುರೇಶ್ ಸಮಜಾಯಿಷಿಕೆಯಿತ್ತಿದ್ದಾರೆ.
ಗಂಭೀರ ಆರೋಪ : ಈ ನಡುವೆ ತಾ. 11 ರಂದು ಭಾಗಮಂಡಲ ಚೆಕ್‍ಪೋಸ್ಟ್‍ನಲ್ಲಿ; ಮಧ್ಯರಾತ್ರಿ ವೇಳೆ ಕಕ್ಕಬ್ಬೆ ಕಡೆಯಿಂದ ಕರಿಕೆಯತ್ತ ತೆರಳುತ್ತಿದ್ದ ಲಾರಿಯೊಂದರಲ್ಲಿ (ಕೆ.ಎ. 12 8634) ಹಲಸು ಇತ್ಯಾದಿ ಬೆಲೆಬಾಳುವ ಮರಗಳ ದಾಸ್ತಾನು ಪತ್ತೆಯಾಗಿದ್ದು, ಲಾರಿಯನ್ನು ವಶಕ್ಕೆ ಪಡೆದಿರುವ ಇಲಾಖೆ ಮಂದಿ ಭಾಗಮಂಡಲ ಅರಣ್ಯ ವಲಯಾಧಿಕಾರಿ ಕಚೇರಿಗೆ ತಂದು ನಿಲ್ಲಿಸಿದ್ದಾಗಿ ತಿಳಿದು ಬಂದಿದೆ.
ಅಲ್ಲದೆ ಸಂಬಂಧಿಸಿದ ಚಾಲಕನಿಂದ ಲಾರಿಯ ಮಾಲೀಕನ ಮಾಹಿತಿ ಕಲೆಹಾಕಿ, ಆ ವ್ಯಕ್ತಿಯನ್ನು ಕಚೇರಿಗೆ ಕರೆಸಿಕೊಂಡು ‘ಕೈ ಬಿಸಿ’ ಮಾಡಿಕೊಂಡಿದ್ದಲ್ಲದೆ; ಲಾರಿ ಸಹಿತ ಮಾಲನ್ನು ಕೂಡ ಬಿಟ್ಟು ಕಳುಹಿಸಿರುವ ಗಂಭೀರ ಆರೋಪವಿದೆ. ಹೀಗಾಗಿ ಅರಣ್ಯಾಧಿ ಕಾರಿಗಳ ಹೇಳಿಕೆಗೂ; ಗ್ರಾಮಸ್ಥರ ಆರೋಪಕ್ಕೂ ವ್ಯತ್ಯಾಸವಿದ್ದು, ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಬೇಕಿದೆ; ಅದು ಉನ್ನತಮಟ್ಟದ ಅಧಿಕಾರಿಗಳ ಹೊಣೆಗಾರಿಕೆಯೂ ಆಗಿದೆ.