ಕೂಡಿಗೆ, ಅ. 18 : ಆಧುನಿಕ ಜಗತ್ತು ಎಷ್ಟು ಮುಂದುವರೆದಿದ್ದರೂ ಮನುಷ್ಯ ಸುಸಂಸ್ಕøತ, ಮೌಲ್ಯವರ್ಧಿತ ಬದುಕಿಗೆ ನಾಡಿನ ಜಾನಪದದ ಮೂಲವೇ ಅಡಿಪಾಯ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಅವರು ಹೇಳಿದರು.

ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅವರು ಜಾನಪದ ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಯುವಕರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಇಂದಿನ ಯುವ ಶಕ್ತಿಯು ಹೊಸ ಹೊಸ ಸಂಶೋಧನೆಯ ಮೂಲದಲ್ಲಿ ಜಾನಪದ ಸಂಸ್ಕøತಿಯನ್ನೇ ಮರೆತಿರುವದರಿಂದ ಪರಸ್ಪರ ಸ್ನೇಹ ಬದುಕು ದೂರವಾಗುತ್ತಿದೆ. ಸ್ಪರ್ಧಾತ್ಮಕ ವಾಣಿಜ್ಯೀಕರಣ ಬದುಕಿನಲ್ಲಿ ವಾಣಿಜ್ಯ ಬ್ಯಾಂಕ್‍ಗಳು ವಸತಿ ಸಾಲ ನೀಡುವದರಿಂದ ಮೂಲ ಕುಟುಂಬ ಗಳು ಒಡೆದು ಹೊಸ ಹೊಸ ಮನೆಗಳು ಕಾಣುತ್ತಿವೆ. ಇದರಿಂದ ಮೂಲ ಸಂಸ್ಕøತಿಯ ಒಟ್ಟು ಕುಟುಂಬಗಳು ನಾಶವಾಗಿರುತ್ತದೆ. ವಿದ್ಯಾಭ್ಯಾಸದ ನಂತರ ಉದ್ಯೋಗ ಪಡೆದ ಯುವಕರು ಪಟ್ಟಣದಲ್ಲೆ ವಾಸ ಮಾಡಲು ಬಯಸುತ್ತಿರುವದು ಹೆಚ್ಚಾಗಿದೆ. ಇದರ ಬದಲು ಪಟ್ಟಣಗಳಲ್ಲೆ ಉದ್ಯೋಗ ಮಾಡಿ, ಹಳ್ಳಿಗಳಲ್ಲಿ ವಾಸ ಮಾಡಿದಾಗ ಜಾನಪದದ ಮೂಲ ಸಂಸ್ಕøತಿ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೂಡಿಗೆ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ಅವರು ಮಾತನಾಡಿ, ಎನ್‍ಎಸ್‍ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಜೊತೆಗೆ ಶಿಬಿರದಲ್ಲಿ ಭಾಗವಹಿಸಿ ಕಲಿತ ಅನುಭವ ತನ್ನ ಬದುಕಿಗು ಸಹಾಯಕವಾಗುತ್ತದೆ. ಅಲ್ಲದೆ, ಸಮಾಜದಲ್ಲಿ ಸಹಬಾಳ್ವೆ, ರಾಷ್ಟ್ರೀಯ ಭಾವೈಕ್ಯತೆ, ಶಿಸ್ತು, ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಎನ್‍ಎಸ್‍ಎಸ್ ಶಿಬಿರಗಳು ಅನುಕೂಲವಾಗುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪನ್ಯಾಸಕರಾದ ವೀಣಾ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಗಿರೀಶ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸೋಮಯ್ಯ, ಶಿಬಿರಾಧಿಕಾರಿಗಳಾದ ಸಿ.ಎಸ್. ಹೇಮಲತಾ, ಸಹ ಶಿಬಿರಾಧಿಕಾರಿಗಳಾದ ವೆಂಕಟೇಶ್, ಶಿವಕುಮಾರ್, ಭವಾನಿ, ಪಲ್ಲವಿ ಮತ್ತಿತರರು ಇದ್ದರು.