ಮಡಿಕೇರಿ, ಅ. 18: ಜನ ಸಾಮಾನ್ಯರಿಗೆ ಯಾವದೇ ರೀತಿಯ ಸಮಸ್ಯೆಯಾಗದಂತೆ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಮಗ್ರ ಸಾರಿಗೆ ಅಭಿವೃದ್ಧಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ ಮಾಲಿಕರು ಒಟ್ಟಾಗಿ ಸಮೀಕ್ಷೆ ನಡೆಸಿದ ವರದಿಯನ್ನು 15 ದಿನದೊಳಗೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಳ್ಳಿ ಅವರು 15 ವರ್ಷ ಮೀರಿದ ವಾಹನಗಳ ರಹದಾರಿ ನವೀಕರಣಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳು ಹಾಗೂ ಹೊಸ ಮಾರ್ಗಗಳ ಪರವಾನಗಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಸಭೆಯ ಗಮನಕ್ಕೆ ತಂದರು.
ಖಾಸಗಿ ಬಸ್ ಮಾಲಿಕರು ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ಯಾವದೇ ಮೂಲಭೂತ ಸೌಲಭ್ಯವಿಲ್ಲದಿರುವ ಕುರಿತು ಸಭೆಯ ಗಮನಕ್ಕೆ ತಂದರು. ಹಾಗೂ ಕೆಎಸ್‍ಆರ್‍ಟಿಸಿ ಬಸ್‍ಗಳು ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುವದಕ್ಕೆ ಅಸಮಾದಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿ ಕೆಎಸ್‍ಆರ್‍ಟಿಸಿ ವಿಭಾಗ ವ್ಯವ ಸ್ಥಾಪಕರಿಗೆ ಕಡ್ಡಾಯವಾಗಿ ಕೆಎಸ್‍ಆರ್‍ಟಿಸಿ ಬಸ್‍ಗಳು ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡದಂತೆ ತಾಕೀತು ಮಾಡಿದರು. ಖಾಸಗಿ ಬಸ್ ಮಾಲೀಕರ ಸಂಘದ ಸದಸ್ಯರುಗಳು ಜಿಲ್ಲೆಯಲ್ಲಿ ಈಗಾಗಲೇ ಅವಶ್ಯವಿರುವ ಕಡೆಗಳಲ್ಲಿ ಖಾಸಗಿ ಬಸ್‍ಗಳು ಸಂಚರಿಸುತ್ತಿದ್ದು, ಇವುಗಳ ರಹದಾರಿಯನ್ನು ಮುಂದುವರಿಸ ಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಮಾತನಾಡಿ, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಪ್ರದೇಶ ಹಾಗೂ ವಾಹನ ನಿಲುಗಡೆ ನಿಷೇಧಿತ ಸ್ಥಳಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೇ ಆದೇಶ ಹೊರಡಿಸಲಾಗುವದು ಎಂದು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಸಾರಿಗೆ ಇಲಾಖೆಯ ಅಧೀಕ್ಷಕ ಶಿವಣ್ಣ, ಲೋಕೋಪ ಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ, ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕಿ ಗೀತಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರೇವಣ್ಣ, ನಗರಾಭಿವೃದ್ಧಿ ಇಲಾಖೆಯ ಸಂಜೀವ್ ಇತರರು ಇದ್ದರು.