ಸೋಮವಾರಪೇಟೆ, ಅ. 18: ಪಶು ವೈದ್ಯಕೀಯ ಇಲಾಖೆಯಿಂದ ಮಾದಾಪುರದ ಪ್ರೌಢಶಾಲಾ ಮೈದಾನದಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಜಾನುವಾರಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕೃಷಿ ಕ್ಷೇತ್ರಕ್ಕೆ ಜಾನುವಾರುಗಳ ಕೊಡುಗೆ ಅಪಾರವಾಗಿದ್ದು, ರೈತರು ಪಶು ಸಂಗೋಪನೆಯಿಂದ ಕೃಷಿ ಸೇರಿದಂತೆ ತಮ್ಮ ಆರ್ಥಿಕ ಮಟ್ಟವನ್ನೂ ಸುಧಾರಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಗ್ರಾ.ಪಂ. ಸದಸ್ಯರುಗಳಾದ ಮಜೀದ್, ಉಮೇಶ್, ಪ್ರೇಮಾ, ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಸ್.ವಿ. ಬಾದಾಮಿ, ಡಾ. ಸಂಜೀವ್ ಕುಮಾರ್ ಶಿಂಧೆ, ಸತ್ತಾರ್‍ಖಾನ್, ಸಿಬ್ಬಂದಿ ಅನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಮನೆ ಮನೆಗೆ ತೆರಳಿ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾನುವಾರುಗಳಿಗೆ ಉಚಿತ ಕಾಲುಬಾಯಿ ಲಸಿಕೆ ಹಾಕಲಾಯಿತು.