ವೀರಾಜಪೇಟೆ, ಅ. 18: ವಿದ್ಯಾರ್ಥಿಗಳನ್ನು ದೇಶದ ಮುಂದಿನ ಭವಿಷ್ಯದ ಉತ್ತಮ ಪ್ರಜೆಯನ್ನಾಗಿಸಲು ಶಿಕ್ಷಕರ ಪಾತ್ರ ಮಹತ್ವವನ್ನು ಕಂಡಿದೆ. ಸಮಾಜದಲ್ಲಿ ಇಂದು ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ವೃತ್ತಿ ಶ್ರೇಷ್ಠತೆಯನ್ನು ಹೊಂದಿದ್ದು ಇಂದಿನ ಸಮಾಜದಲ್ಲಿಯೂ ಶಿಕ್ಷಕರಿಗೆ ವಿಶೇಷ ಗೌರವ ಸ್ಥಾನ ಮಾನ ಇದೆ ಎಂದು ಲಯನ್ಸ್‍ನ ಜೋನಲ್ ಅಧ್ಯಕ್ಷ ಕೆ.ಕೆ. ದಾಮೋದರ್ ತಿಳಿಸಿದರು.

ವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿ, ಶಿಕ್ಷಕರು, ವಿದ್ಯಾರ್ಥಿಗಳಿಗೆ ಶಿಕ್ಷಣ ದೊಂದಿಗೆ ವಿದ್ಯಾರ್ಥಿ ಜೀವನ ದಿಂದಲೇ ದಕ್ಷತೆ ಪ್ರಾಮಾಣಿಕತೆ ಹಾಗೂ ಸಮಾಜ ಸೇವೆಯ ಅರಿವನ್ನು ಮೂಡಿಸಬೇಕು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಇಲ್ಲಿನ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ಪ್ರಧಾನ ಆಡಳಿತಗಾರರು, ಧರ್ಮಾಧಿಕಾರಿ ಹಾಗೂ ಕೊಡಗಿನ ಪ್ರತಿಷ್ಠಿತ ಹದಿನೆಂಟು ಚರ್ಚ್‍ಗಳ ಮುಖ್ಯಸ್ಥರು ಆಗಿರುವ ರೆ. ಫಾ. ಮದಲೈಮುತ್ತು ಅವರನ್ನು ಲಯನ್ಸ್ ಕ್ಲಬ್‍ನಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮದಲೈಮುತ್ತು ಅವರು ತಮ್ಮ ಸಂಸ್ಥೆಯಿಂದ, ಕಳೆದ ಬಾರೀ ಉತ್ತರ ಕೊಡಗಿನ ಮಕ್ಕಂದೂರಿನ ವಿವಿಧೆಡೆಗಳಲ್ಲಿ ಹಾಗೂ ಈ ವರ್ಷ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು, ತೋರ, ಬಿಟ್ಟಂಗಾಲ, ನಾಂಗಾಲ ಗ್ರಾಮಗಳು ಸೇರಿದಂತೆ ವಿವಿಧೆಡೆಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ದುರಂತದಿಂದ ಮನೆ ಮಠ ಆಸ್ತಿ ಪಾಸ್ತಿ ಕಳೆದುಕೊಂಡ ಸುಮಾರು 50 ಮಂದಿ ಸಂತ್ರಸ್ತ ಫಲಾನುಭವಿಗಳಿಗೆ ಆಯ್ದ ಜಾಗದಲ್ಲಿ ಮನೆ ಕಟ್ಟಿಕೊಡುವ ಯೋಜನೆಯ ಉದ್ದೇಶವಿದೆ. ಈ ಸಂಬಂಧದಲ್ಲಿ ಸರಕಾರದ ಸಂಬಂಧಿಸಿದ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮುಂದುವರೆದಿದೆ. ಅಂತಿಮ ಆದೇಶದ ನಂತರ ಮನೆ ಕಟ್ಟಿಕೊಡುವ ಯೋಜನೆಗೆ ಚಾಲನೆ ನೀಡಲಾಗುವದು. ಈಗಿನ ಸಂತ ಅನ್ನಮ್ಮ ಪದವಿ ಕಾಲೇಜಿನೊಂದಿಗೆ ಸಾರ್ವಜನಿಕವಾಗಿ ಬೇಡಿಕೆಯಿರುವ ಆಯ್ದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಎಲ್ಲ ಸಿದ್ಧತೆಗಳು ನಡೆದಿವೆ.

ಸಂತ ಅನ್ನಮ ವಿದ್ಯಾಸಂಸ್ಥೆಗೆ ಕೊಡಗಿನ ಜನತೆ ನೀಡುತ್ತಿರುವ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಪೌಲ್ ಕ್ಷೇವಿಯರ್ ಮಾತನಾಡಿ, ಕಳೆದ ನಾಲ್ಕು ತಿಂಗಳ ಹಿಂದೆ ಕೆದಮುಳ್ಳೂರು ಗ್ರಾಮದ ತೋರದಲ್ಲಿ ಪ್ರಕೃತಿ ವಿಕೋಪದಿಂದ ಹತ್ತು ಮಂದಿ ಭೂ ಸಮಾಧಿಯಾದ ಕುಟುಂಬಕ್ಕೆ ಕ್ಲಬ್‍ನ ವತಿಯಿಂದ ಸಂತ್ರಸ್ತರಿಗೆ ವಿವಿಧ ರೀತಿಯಲ್ಲಿ ಸಹಾಯ ಹಸ್ತ ನೀಡಲಾಗಿದೆ. ಇದೇ ಸೇವಾ ಮನೋಭಾವನೆಯನ್ನು ಕ್ಲಬ್ ಮುಂದುವರೆಸಲಿದೆ ಎಂದರು.

ವೇದಿಕೆಯಲ್ಲಿ ಜಿ.ಆರ್.ಸಿ. ಲ. ನವೀನ್ ಕಾರ್ಯಪ್ಪ, ಖಜಾಂಚಿ ಎಂ.ಎಂ. ಸುರೇಶ್, ಲಯನ್ಸ್ ಕ್ಲಬ್‍ನ ಸೋನಿ ಪೌಲ್, ಕಾರ್ಯದರ್ಶಿ ಎ.ಎ. ಅಜಿತ್ ಉಪಸ್ಥಿತರಿದ್ದರು. ಲಯನ್ಸ್‍ನ ಭಾನು ಕೃಷ್ಣಮೂರ್ತಿ, ರೂಪಾ ಸೋಮಯ್ಯ ಅತಿಥಿಗಳ ಪರಿಚಯ ಮಾಡಿದರು. ಮಾಜಿ ಅಧ್ಯಕ್ಷ ತ್ರಿಶೂ ಗಣಪತಿ ನಿರೂಪಿಸಿದರು.