ಗೋಣಿಕೊಪ್ಪ ವರದಿ, ಅ. 18: ಇಲ್ಲಿನ ಕಾವೇರಿ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಡಾ. ಎಂ.ಎಂ. ಚಂಗಪ್ಪ ಜ್ಞಾಪಕಾರ್ಥ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪಿ.ಎಸ್. ಅಜಿತೇಶ್ ಹಾಗೂ ಆನಂದ್ ಬಾಳಪ್ಪ ತಿಲಗಂಜಿ ಜೋಡಿ ಪ್ರಥಮ, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಸಮನ್ ಸುಜೈನ್ ಹಾಗೂ ಟಿ.ಜೆ. ದೇವಿಕ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಜಿಲ್ಲೆಯ ವಿವಿಧ ಕಾಲೇಜುಗಳಿಂದ 21 ತಂಡಗಳು ಭಾಗವಹಿಸಿದ್ದವು. ಉಪನ್ಯಾಸಕ ಬೆನಡಿಕ್ಟ್ ಸಾಲ್ಢಾನ, ಕೆ.ಜಿ. ಮುದ್ದಪ್ಪ, ಎ.ಎ. ಪೊನ್ನಪ್ಪ ಹಾಗೂ ಪ್ರಕೃತಿ ಕ್ವಿಝ್ ಮಾಸ್ಟರ್‍ಗಳಾಗಿ ಕಾರ್ಯ ನಿರ್ವಹಿಸಿದರು. ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ, ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್, ಕಾರ್ಯಕ್ರಮ ಸಂಚಾಲಕ ಸಿ.ಎಂ. ಕಿರಣ್ ಬಹುಮಾನ ವಿತರಣೆ ಮಾಡಿದರು.