ಸೋಮವಾರಪೇಟೆ, ಅ. 18: ಜಿ.ಪಂ. ಹಾಗೂ ತಾಲೂಕು ಕೃಷಿ ಇಲಾಖೆ ವತಿಯಿಂದ ಅರೆಯೂರಿನಲ್ಲಿ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕಾರ್ಯಕ್ರಮ ನಡೆಯಿತು.

ಅರೆಯೂರು ಗ್ರಾಮದ ಈಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ಸಭಾ ಕಾರ್ಯಕ್ರಮವನ್ನು ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಉದ್ಘಾಟಿಸಿದರು. ಮಡಿಕೇರಿಯ ಬೇಸಾಯ ತಜ್ಞ ಡಾ. ಬಸವಲಿಂಗಯ್ಯ ಭತ್ತದ ಬೆಳೆಯಲ್ಲಿ ಬರುವ ಕೀಟ ರೋಗದ ಹತೋಟಿ ಕ್ರಮದ ಬಗ್ಗೆ ಮಾಹಿತಿ ಒದಗಿಸಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ಡಾ. ವೀರೇಂದ್ರಕುಮಾರ್ ಕಾಳುಮೆಣಸಿನ ಕೀಟ ಬಾಧೆಗಳ ತಡೆ ಬಗ್ಗೆ ಕೃಷಿಕರಿಗೆ ಉಪಯುಕ್ತ ಸಲಹೆ ನೀಡಿದರು. ಡಾ. ದೇವಯ್ಯ ಕಾಳುಮೆಣಸಿನ ನರ್ಸರಿ ನಿರ್ವಹಣೆ, ತೋಟಗಾರಿಕಾ ತಜ್ಞೆ ಡಾ. ವಿದ್ಯಾಶ್ರೀ ಕೈತೋಟ, ತರಕಾರಿ ಬೆಳೆಗಳ ಬಗ್ಗೆ ವಿವರಣೆ ನೀಡಿದರು.

ಕಾಫಿ ಮಂಡಳಿಯ ಕ್ಷೇತ್ರಾಧಿಕಾರಿ ಲಕ್ಷ್ಮೀಕಾಂತ್ ಕಾಫಿ ಬೆಳೆಯ ಮೌಲ್ಯವರ್ಧನೆ, ಪ್ರಗತಿಪರ ಕೃಷಿಕ ಖಾಲಿಸ್ತಾ ತ್ಯಾಜ್ಯ ವಸ್ತುಗಳಿಂದ ಕಾಂಪೋಸ್ಟ್ ತಯಾರಿಸಿ ಸಿಂಪಡಣೆ ಮಾಡುವ ಬಗ್ಗೆ ಮಾಹಿತಿ ಒದಗಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಇಲಾಖೆಯ ವಿವಿಧ ಯೋಜನೆಗಳು, ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಸವಿತ ಈರಪ್ಪ, ಕೃಷಿಕ ಸಮಾಜದ ಅಧ್ಯಕ್ಷ ತಾಕೇರಿ ಪೊನ್ನಪ್ಪ, ಕೃಷಿ ಅಧಿಕಾರಿ ನವ್ಯ ನಾಣಯ್ಯ, ಸಹಾಯಕ ಕೃಷಿ ಅಧಿಕಾರಿ ಕವಿತ, ಪಿ.ಸಿ. ಪೂಣಚ್ಚ, ಎಂ.ಎನ್. ಮಾಧವರಾವ್, ಸ್ವರ್ಣ, ಕೃಷಿ ಇಲಾಖಾ ಸಿಬ್ಬಂದಿಗಳು, ಗ್ರಾ.ಪಂ. ಸದಸ್ಯರು, ವಿವಿಧ ಇಲಾಖಾಧಿಕಾರಿಗಳು, ರೈತರು, ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.