ಶ್ರೀಮಂಗಲ, ಅ. 16 : ಕೊಡಗು - ಕೇರಳ ಗಡಿ ಪ್ರದೇಶಕ್ಕೆ ಸೇರಿದ ಅರಣ್ಯದ ಅಂಚಿನಲ್ಲಿರುವ ಕುಟ್ಟ ಮತ್ತು ಕೆ. ಬಾಡಗ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರಂತರ ವನ್ಯಪ್ರಾಣಿಗಳ ಹಾವಳಿ ಮತ್ತು ವಿದ್ಯುತ್ ಸಮಸ್ಯೆಯಿಂದ ಜನರು ದಿನನಿತ್ಯ ಸಂಕಷ್ಟಪಡುತ್ತಿದ್ದು, ಈ ಸಮಸ್ಯೆಗಳ ಪರಿಹಾರಕ್ಕೆ ನಿಗದಿಪಡಿಸಿದ್ದ ಸಭೆಗೆ ಶಾಸಕರು ಹಾಗೂ ಸೆಸ್ಕ್, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಆಗಮಿಸದ ಕಾರಣ ಯಾವದೇ ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯ ವಾಗದೆ ಚರ್ಚೆಗಷ್ಟೇ ಸೀಮಿತವಾಗಿ ಸಭೆ ಮುಕ್ತಾಯವಾಯಿತು.

ಕಳೆದ ತಾ. 25ರಂದು ನಡೆದ ಕುಟ್ಟ ಗ್ರಾ.ಪಂ. ಸಭೆಯಲ್ಲಿ ವಿದ್ಯುತ್ ಹಾಗೂ ವನ್ಯಪ್ರಾಣಿಗಳ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಉಭಯ ಇಲಾಖೆ ಉನ್ನತಾಧಿಕಾರಿಗಳ ಸಭೆ ನಡೆಸಿ; ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನೆÀ್ನಲೆಯಲ್ಲಿ ಕುಟ್ಟ ಕೊಡವ ಸಮಾಜದಲ್ಲಿ ನಿಗದಿಪಡಿಸಿದ್ದ ಸಭೆಗೆ ಅರಣ್ಯ ಇಲಾಖೆಯ ಎ.ಸಿ.ಎಫ್, ಸೆಸ್ಕ್‍ನ ಎ.ಇ.ಇ, ಆಗಮಿಸಿದ್ದರು. ಆದರೆ ಇವರ ಕಾರ್ಯವ್ಯಾಪ್ತಿಯಲ್ಲಿ ವಿದ್ಯುತ್ ಹಾಗೂ ವನ್ಯಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಕಾರ್ಯಯೋಜನೆ ರೂಪಿಸಲು ಸಾಧ್ಯವಾಗದೇ ಇರುವ ಹಿನೆÀ್ನಲೆಯಲ್ಲಿ; ಅಂತಿಮವಾಗಿ ಯಾವದೇ ತೀರ್ಮಾನಕ್ಕೆ ಬಾರದೆ ಸಭೆ ಮುಕ್ತಾಯವಾಯಿತು.

ಸಭೆಯ ಆರಂಭದಲ್ಲಿ ಜಿ.ಪಂ ಸದಸ್ಯ ಶಿವು ಮಾದಪ್ಪ ಮಾತನಾಡಿ, ಕಳೆದ ಹಲವು ದಶಕದಿಂದ ವನ್ಯಪ್ರಾಣಿಗಳ ಹಾವಳಿ ಮತ್ತು ನಿರಂತರ ವಿದ್ಯುತ್ ಸಮಸ್ಯೆಯಿಂದ ಜನರ ಸ್ಥಿತಿ ಶೋಚನೀಯವಾಗಿದೆ. ಗ್ರಾಮಗಳಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದು, ವಿದ್ಯುತ್ ತಂತಿ ಸ್ಪರ್ಶಗೊಂಡು ಕಾಡಾನೆಗಳು ಸತ್ತಿರುವ ಹಲವು ಪ್ರಕರಣಗಳು ಉಂಟಾಗಿದೆ ಎಂದರು. ರಾತ್ರಿ 7-8 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅರಣ್ಯ ದಂಚಿನಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ ಗದ್ದೆ ನೆಡುವದನ್ನೇ ಬಿಡಲಾಗಿದೆ. ಅರಣ್ಯ ಇಲಾಖೆಯೇ ಭತ್ತದ ಗದ್ದೆ ಪಾಳುಬಿಡಲು ನೇರ ಕಾರಣವಾಗಿದ್ದು, ಅಂತರ್‍ಜಲ ಕುಗ್ಗುತ್ತಿದೆ. ಇದು ಬರಗಾಲಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ವಿಷ್ಣು ಕಾರ್ಯಪ್ಪ ಮಾತನಾಡಿ, ಕೊಡಗಿನಲ್ಲಿ ಪಂಪ್ ಸೆಟ್ಟ್‍ಗಳಿಗೆ ಕನಿಷ್ಟ ದರ ಮತ್ತು ಮೀಟರ್ ದರ ಎರಡನ್ನು ಹಾಕಲಾಗುತ್ತಿದೆ. ಇದರಲ್ಲಿ ಯಾವದಾದರೂ ಒಂದನ್ನು ಮಾತ್ರ ಪಾವತಿಸುವ ಪದ್ಧತಿ ಹೊರ ಜಿಲ್ಲೆಯಲ್ಲಿದೆ. ಕೊಡಗಿಗೆ ಪ್ರತ್ಯೇಕ ಏಕೆ? ಕಾಡಾನೆ ಸಾಯುವ ಕಾರಣಕ್ಕಾಗಿ ರಾತ್ರಿ ವಿದ್ಯುತ್ ಕಡಿತ ಮಾಡುವದು ನಿಲ್ಲಿಸಿ. ಮಾರ್ಗವನ್ನು ಎತ್ತರಿಸುವ ಜವಾಬ್ದಾರಿ ಇಲಾಖೆಯದ್ದಾಗಿದೆ ಎಂದರು. ನಾಗರಹೊಳೆ ಸರಹದ್ದು ವ್ಯಾಪ್ತಿಯಲ್ಲಿ ಕಂದಕ ಮಾಡಿದ್ದು, ನಿರ್ವಹಣೆ ಮಾಡಿ. ಅರಣ್ಯದಂಚಿನಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಬಗ್ಗೆ ಕಳೆದ ಎರಡು ದಶಕದಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳುತ್ತಾ ಬರುತ್ತಿದ್ದು, ಇದು ಎಲ್ಲಿ ಆಗಿದೆ ಹಾಗೂ ಎಷ್ಟು ಆಗಿದೆ ಎಂದು ನಾವು ಕಂಡಿಲ್ಲ ಎಂದು ತೀವ್ರ ನೋವು ತೋಡಿಕೊಂಡರು.

ಗ್ರಾ.ಪಂ. ಸದಸ್ಯ ಹೆಚ್.ವೈ. ರಾಮಕೃಷ್ಣ ಮಾತನಾಡಿ, ಅರಣ್ಯ ಸರಹದ್ದಿನಲ್ಲಿ ಅರಣ್ಯ ಇಲಾಖೆ ತನ್ನ ಗಡಿ ಗುರುತಿಸಲು ಜಿ.ಪಿ.ಎಸ್ ಸರ್ವೆ ಮಾಡಿ ಕಾಫಿ ತೋಟ, ವಸತಿ ಜಾಗ ಮತ್ತು ರಸ್ತೆಗಳಲ್ಲಿ ಕಲ್ಲು ಹಾಕುತ್ತಿದೆ. ಇದು ಸರಿಯಲ್ಲ ಎಂದು ಕಿಡಿಕಾರಿದರು.

ಸಭೆಯಲ್ಲಿ ಸಮಸ್ಯೆಗೆ ಉತ್ತರಿಸಿದ ಸೆಸ್ಕ್ ಎ.ಇ.ಇ. ಅಂಕಯ್ಯ, ಕುಟ್ಟ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಸುಧಾರಿಸಲು ಶ್ರೀಮಂಗಲ - ಕುಟ್ಟ ಎಕ್ಸ್‍ಪ್ರೆಸ್ 11 ಕೆವಿ ವಿದ್ಯುತ್ ಮಾರ್ಗವನ್ನು ಇದೇ ತಾ. 20ರ ಒಳಗೆ ಚಾಲನೆ ನೀಡಲಾಗುವದು. ಹೆಚ್ಚುವರಿ ಲೈನ್‍ಮ್ಯಾನ್‍ಗಳನ್ನು ನಿಯೋಜನೆ ಮಾಡಲಾಗುವದು ಎಂದು ಭರವಸೆ ನೀಡಿದರು.

ಮಡಿಕೇರಿ ವನ್ಯಜೀವಿ ವಿಭಾಗದ ಎ.ಸಿ.ಎಫ್ ದಯಾನಂದ್ ಮಾತನಾಡಿ, 1904ರ ಸುತ್ತೋಲೆ ಯಂತೆ ಜಿ.ಪಿ.ಎಲ್ ಸರ್ವೆ ಮಾಡಲಾಗಿದ್ದು, ಹಲವೆಡೆ ತಕರಾರು ಇದೆ. ಇನ್ನು ಕೆಲವರು ಜಾಗ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ಯಾವದೇ ಕಾರಣಕ್ಕೆ ಬಲತ್ಕಾರದಿಂದ ಜಾಗ ಬಿಡಿಸಲು ಪ್ರಯತ್ನಿಸುವದಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಬಂದಿರುವ ಮನವಿಯಂತೆ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಿ ಹದ್ದುಬಸ್ತು ಗುರುತಿಸಲು ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಇ.ಓ ಷಣ್ಮುಗಂ, ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಶ್ರೀಮಂಗಲ ಆರ್.ಎಫ್.ಓ ವಿರೇಂದ್ರ, ತಿತಿಮತಿ - ಪೆÇನ್ನಂಪೇಟೆ ಆರ್.ಎಫ್.ಓ. ಅಶೋಕ್, ಕುಟ್ಟ ಪಿ.ಡಿ.ಓ ಅನಿಲ್‍ಕುಮಾರ್ ಹಾಜರಿದ್ದರು.