ಮಡಿಕೇರಿ, ಅ. 16: ಜನೋತ್ಸವ ಎಂದೇ ಪ್ರತಿಬಿಂಬಿತವಾಗಿರುವ ನಾಡಹಬ್ಬವಾದ ಮಡಿಕೇರಿ ದಸರಾ ಸಂಪನ್ನಗೊಂಡಿದೆ. ಹತ್ತು - ಹಲವು ಬೆಳವಣಿಗೆಗಳು... ವಿಭಿನ್ನ ಪ್ರಯತ್ನಗಳು... ಜನಸಾಮಾನ್ಯರ ವಿವಿಧ ರೀತಿಯ ಅನಿಸಿಕೆಗಳೊಂದಿಗೆ ಈ ಜನೋತ್ಸವ ಮುಕ್ತಾಯ ಕಂಡಿದೆ. ಆದರೂ ಈ ಎಲ್ಲಾ ಕಾರ್ಯಕ್ರಮಗಳ ಚುಕ್ಕಾಣಿ ಹಿಡಿದವರು, ದಸರಾ ಸಮಿತಿಯ ಪ್ರಮುಖರು, ಈ ಪ್ರಮುಖರು ಈ ಬಾರಿಯ ಉತ್ಸವದ ಕುರಿತಾಗಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು... ಅನುಭವದ ಮಾತುಗಳು ಹೀಗಿವೆ...
ಕೆಲಸ ನಿರ್ವಹಿಸುವ ಸ್ಥಳದ ಹಬ್ಬಗಳು ನಮ್ಮ ಹಬ್ಬ: ಜಿಲ್ಲಾಧಿಕಾರಿ
ಅಧಿಕಾರಿಗಳಾಗಿ ಯಾವ ಜಿಲ್ಲೆಗಳಲ್ಲಿ ನಾವು ಕೆಲಸ ನಿರ್ವಹಿಸುತ್ತೇವೆಯೋ ಅಲ್ಲಿನ ಹಬ್ಬಗಳು... ನಮ್ಮ ಹಬ್ಬಗಳಂತೆಯೇ... ಈ ವಿಚಾರಧಾರೆಯಂತೆ ಕೊಡಗಿನ ದಸರಾ ಉತ್ಸವದಲ್ಲಿ ಸಂಭ್ರಮದಿಂದಲೇ ತೊಡಗಿಸಿಕೊಳ್ಳಲಾಗಿದೆ. ಇದರೊಂದಿಗೆ ಸೂಕ್ತ ಸಹಕಾರವನ್ನೂ ಆ ಸಮಿತಿಗೆ ನೀಡಲಾಗಿದೆ ಎಂಬ ಅಭಿಪ್ರಾಯ ಜಿಲ್ಲಾಧಿಕಾರಿ ಹಾಗೂ ದಸರಾ ಸಮಿತಿ ಅಧ್ಯಕ್ಷರಾಗಿರುವ ಅನೀಸ್ ಕಣ್ಮಣಿ ಜಾಯ್ ಅವರದ್ದಾಗಿದೆ. ಶಾಂತಿ-ಸುವ್ಯವಸ್ಥೆ ಕಾಪಾಡುವದರೊಂದಿಗೆ ನಾಡಹಬ್ಬದ ಸಂಭ್ರಮಾಚರಣೆ ಯಶಸ್ಸಾಗಿದೆ ಎಂಬ ತೃಪ್ತಿ ಅವರದ್ದಾಗಿದೆ.
ಕಡಿಮೆ ಅವಧಿಯಲ್ಲೂ ಅಚ್ಚುಕಟ್ಟು: ರಾಬಿನ್
ಪ್ರಸಕ್ತ ಸಾಲಿನ ದಸರಾ ಉತ್ತಮ ರೀತಿಯಲ್ಲಿ ನಡೆದಿದೆ. ಎಲ್ಲರ ಸಹಕಾರ, ಜಿಲ್ಲಾಡಳಿತ, ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ಪಾರದರ್ಶಕತೆಯೊಂದಿಗೆ ಕಡಿಮೆ ಅವಧಿಯಲ್ಲೂ ಅಚ್ಚುಕಟ್ಟಾಗಿ ಉತ್ಸವವನ್ನು ನಡೆಸಲಾಗಿದೆ. ಎಲ್ಲಾ ಉಪ ಸಮಿತಿಯವರು ಶಕ್ತಿಮೀರಿ ಶ್ರಮಿಸಿದ್ದಾರೆ. ಸಮಿತಿಯ ಪ್ರಮುಖರು ಸ್ಥಾನಮಾನಕ್ಕೆ ಮಾತ್ರ ಅಲ್ಲ ದುಡಿದು ತೋರಿಸಿದ್ದಾರೆ. ಪ್ಲಾಸ್ಟಿಕ್ ಮುಕ್ತ ಕನಸು ಯಶಸ್ಸು ಕಂಡಿದೆಯಾದರೂ ಅಂತಿಮ ದಿನ ಸ್ವಲ್ಪ ತೊಂದರೆಯಾಗಿದೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗೊಂದಲವಾಗಿತ್ತು. ಇನ್ನು ಸೂಕ್ತ ಬಿಲ್ ಒದಗಿಸಿದ ಬಳಿಕ ಎಲ್ಲವನ್ನೂ ಸರಿಪಡಿಸಲಾಗುವದು. ಆಹ್ವಾನಿತ ಜನಪ್ರತಿನಿಧಿಗಳು ಗೈರು ಹಾಜರಿ ವಿಚಾರದಲ್ಲಿ ಅಪಾರ್ಥ ಬೇಡ. ಇದಕ್ಕೆ ಅದರದ್ದೇ ಆದ ಸಕಾರಣಗಳಿವೆ. ತೀರ್ಪುಗಾರಿಕೆಯ ಗೊಂದಲ ಮುಖ್ಯ ಸಮಿತಿಗೆ ಬರುವದಿಲ್ಲ. ಇದು ಕಾರ್ಯಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಅವರ ಅಭಿಪ್ರಾಯ.
ಯಶಸ್ವಿ ಕಾರ್ಯಕ್ರಮ: ಜಗದೀಶ್
ಒಟ್ಟಾರೆಯಾಗಿ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು, ಜನಪ್ರತಿನಿಧಿಗಳ ಸಹಕಾರವಿತ್ತು. ಜನಸಂಖ್ಯೆ ಸ್ವಲ್ಪ ವಿರಳವಾಗಿದ್ದು, ಇದಕ್ಕೆ ಮಳೆ ಎಂಬ ಮಾಹಿತಿ ಹರಡಿದ್ದು ಕಾರಣವಾಗಿದೆ. ಆರಂಭದಲ್ಲಿ ತುಸು ತೊಂದರೆಯಾಗಿದ್ದರೂ ಬಳಿಕ ಎಲ್ಲವೂ ಸರಿಯಾಗಿದೆ. ತೀರ್ಪುಗಾರಿಕೆಯ ವಿಚಾರ ದಶಮಂಟಪ ಸಮಿತಿಯದ್ದಾಗಿದೆ ಎಂದು ಕಾರ್ಯದರ್ಶಿ ಬಿ.ಕೆ. ಜಗದೀಶ್ ನುಡಿದರು.
ಉತ್ತಮ ಆಯೋಜನೆ: ಉಮೇಶ್ ಸುಬ್ರಮಣಿ
ದಸರಾ ಕಾರ್ಯಕ್ರಮಗಳು ಉತ್ತಮವಾಗಿ ಆಯೋಜಿಸಲ್ಪಟ್ಟು ಯಶಸ್ಸಾಗಿದೆ. ಯಾರಿಗೂ ಅನ್ಯಾಯವಾಗದ ರೀತಿ ಪ್ರಯತ್ನ ನಡೆಸಲಾಗಿದೆ ಎಂದು ಸಮಿತಿ ಖಜಾಂಚಿ ಉಮೇಶ್ ಸುಬ್ರಮಣಿ ಹೇಳಿದರು. ತಾನು ಖಜಾಂಚಿಯಾದರೂ ಸರಕಾರದ ಪಾತ್ರ ಹೆಚ್ಚಿದ್ದರಿಂದ ಅಧಿಕ ಜವಾಬ್ದಾರಿ ಇರಲಿಲ್ಲ.
ವೈಯಕ್ತಿಕ ಪ್ರತಿಷ್ಠೆ ಇರಲಿಲ್ಲ: ರವಿ
ಸಾಂಸ್ಕøತಿಕ ಕಾರ್ಯಕ್ರಮ ಸಾರ್ವಜನಿಕ ಜವಾಬ್ದಾರಿ. ಇದರಲ್ಲಿ ಯಾವದೇ ವೈಯಕ್ತಿಕ ಪ್ರತಿಷ್ಠೆ ಇರಲಿಲ್ಲ. ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಯದಿದ್ದರೆ ಇಡೀ ಮಡಿಕೇರಿ ದಸರಾಕ್ಕೆ ಕಪ್ಪುಚುಕ್ಕೆ... ಈ ಹಿನ್ನೆಲೆ ಈ ಹಿಂದಿನ ಅನುಭವಸ್ಥರ ಸಹಕಾರ ಪಡೆದಿದ್ದು ನಿಜ... ಹಲವು ರೀತಿಯ ಅನುಭವಗಳು ಹೊಸಬನಾದ ನನಗೆ ಆಗಿವೆ... ನಾನೇ ಅಧ್ಯಕ್ಷನಾಗಿ ನಾನು ವೇದಿಕೆಯಲ್ಲಿ ಕೂತಿದ್ದು ಕಹಿ ಅನುಭವ. ತಪ್ಪು ಕಂಡು ಹಿಡಿಯುವವರು ಸಲಹೆ ನೀಡಿದ್ದಲ್ಲಿ ಚೆನ್ನಾಗಿತ್ತು. ವೇದಿಕೆಯಲ್ಲಿ ಸಾಕಷ್ಟು ಕಲಾವಿದರು ಪ್ರದರ್ಶನ ನೀಡಿದ್ದಾರೆ. ಸಂಭಾವನೆ ವಿಚಾರದಲ್ಲಿ ಕೆಲವು ಖ್ಯಾತ ಕಲಾವಿದರು ಹಿಂದೇಟು ಹಾಕಿದ್ದಾರೆ. ಆದರೂ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಿಭಾಯಿಸಿರುವ ತೃಪ್ತಿ ಇದ್ದು, ಮುಂದಿನ ಬಾರಿಗೆ ಸಾಕಷ್ಟು ಅನುಭವ ದೊರೆತಂತಾಗಿದೆ ಎಂದು ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಆರ್.ಬಿ. ರವಿ ಪ್ರತಿಕ್ರಿಯಿಸಿದರು.
ತೃಪ್ತಿ ನೀಡಿದೆ: ಸೋಮೇಶ್
ಈ ಬಾರಿ ಸಾಹಿತ್ಯಾತ್ಮಕವಾದ ಕವಿಗೋಷ್ಠಿಯನ್ನು ಶಿಸ್ತುಬದ್ಧವಾಗಿ, ಅರ್ಥಪೂರ್ಣವಾಗಿ ನಡೆಸಲಾಗಿದೆ. ವಿಭಿನ್ನ ರೀತಿಯ ಕಾರ್ಯಕ್ರಮ ಯಶಸ್ಸು ಕಂಡ ತೃಪ್ತಿಯಿದೆ. ಆಹ್ವಾನಿತ ಎಲ್ಲರೂ ಪಾಲ್ಗೊಂಡು ಸಹಕಾರ ನೀಡಿದ್ದಾರೆ. ಕವಿಗಳು ತೂಕದ ಕವನವಾಚನ ಮಾಡಿದ್ದಾರೆ. ಪ್ರಸ್ತುತ ಎರಡು ಅಕಾಡೆಮಿಗಳು ಇಲ್ಲದೆ ಸಹಕಾರ ದೊರೆತಿಲ್ಲ. ಆದರೂ ರೂ. 75 ಸಾವಿರದೊಳಗೆ ಕಾರ್ಯಕ್ರಮ ನಡೆಸಿದ್ದು ಮುಂದಿನ ಬಾರಿ ಇನ್ನಷ್ಟು ವಿಭಿನ್ನತೆಯಿಂದ ಆಯೋಜಿಸುವ ಚಿಂತನೆ ಇರುವದಾಗಿ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಚಿ.ನಾ. ಸೋಮೇಶ್ ಅವರು ತಮ್ಮ ಅನುಭವ ಹಂಚಿಕೊಂಡರು.
ಒಂದೆಡೆ ಖುಷಿ... ಮತ್ತೊಂದೆಡೆ ಬೇಸರ: ಅನಿಲ್
ಮಕ್ಕಳ ದಸರಾ ಹಾಗೂ ಮಹಿಳಾ ದಸರಾದ ಬಗ್ಗೆ ಪ್ರತಿಕ್ರಿಯಿಸಿದ ಇದರ ಸಂಚಾಲಕ ಹಾಗೂ ಸಲಹೆಗಾರ ಎಚ್.ಟಿ. ಅನಿಲ್ ಅವರು, ಮಕ್ಕಳ ದಸರಾ 7ನೇ ವರ್ಷ ಕಂಡಿದ್ದು, ಅತ್ಯಂತ ಯಶಸ್ವಿಯಾಗಿದೆ. 650ಕ್ಕೂ ಅಧಿಕ ಮಕ್ಕಳು ಇದರಲ್ಲಿ ಸಂಭ್ರಮಿಸಿದ್ದಾರೆ. ಅಂಗಡಿಗಳು ಜಾಸ್ತಿ ಇತ್ತು. ಛದ್ಮವೇಷದ ಮೂಲಕ ಪ್ರತಿಭೆ ಅನಾವರಣಗೊಂಡಿತು. ರೋಟರಿ ಮಿಸ್ಟಿ ಹಿಲ್ಸ್ ಪ್ರಾಯೋಜಕತ್ವ, ದಸರಾ ಸಮಿತಿ ಸಹಕಾರ ಇತ್ತು ಎಂದು ಸ್ಮರಿಸಿದರು.
ಮಹಿಳಾ ದಸರಾದಲ್ಲಿ 1400 ಕ್ಕೂ ಅಧಿಕ ಮಹಿಳೆಯರ ಭಾಗವಹಿಸುವಿಕೆ ವಿವಿಧ ಸ್ಪರ್ಧೆ ಕ್ರೀಡೆಗಳು ಸಂಭ್ರಮದಿಂದ ಜರುಗಿದ್ದು, ಈ ಕಾರ್ಯಕ್ರಮವೂ ಖುಷಿ ಕೊಟ್ಟಿದೆ. ಆದರೆ ಕೆಲವು ರಾಜಕಾರಣಿಗಳು ವೇದಿಕೆ ಏರಲು ಪೈಪೋಟಿ ನಡೆಸಿದ್ದು ಮಾತ್ರ ಬೇಸರ ಮೂಡಿಸಿದೆ ಎಂದು ಅನಿಲ್ ನುಡಿದರು.
ಕ್ರೀಡಾಕೂಟ ಯಶಸ್ಸು: ಹರೀಶ್
ದಸರಾ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟಗಳು ಎಲ್ಲರ ಸಹಕಾರ, ಸಹಭಾಗಿತ್ವದಿಂದ ಯಶಸ್ವಿಯಾಗಿದೆ. ದಸರಾ ಸಮಿತಿ, ಜಿಲ್ಲಾಧಿಕಾರಿಗಳು, ಜನತೆ ಸಹಕರಿಸಿದ್ದಾರೆ. ಸ್ಪಂದನೆಯೂ ಹೆಚ್ಚಾಗಿತ್ತು. ಕಬಡ್ಡಿ ಸೇರಿದಂತೆ ಇತರ ಸ್ಪರ್ಧೆಗಳು ರಂಜನೆ ನೀಡಿವೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಪ್ರತಿಕ್ರಿಯಿಸಿದರು.
ಯಾರನ್ನೂ ನಿರ್ಲಕ್ಷ್ಯ ಮಾಡಿಲ್ಲ: ಮೊಣ್ಣಪ್ಪ
ತಮ್ಮ ಜವಾಬ್ದಾರಿಯಲ್ಲಿ ನಿಯಮವನ್ನೂ ಪಾಲಿಸಲಾಗಿದೆ. ಎಲ್ಲಾ ಪಕ್ಷದವರಿಗೂ ಆದ್ಯತೆ ನೀಡಲಾಗಿದ್ದು, ಯಾರನ್ನೂ ನಿರ್ಲಕ್ಷ್ಯ ಮಾಡಿಲ್ಲ. ಪ್ರಮುಖ ಅತಿಥಿಗಳು ಗೈರು ಹಾಜರಾಗಿದ್ದು ಹೊರತುಪಡಿಸಿದರೆ ದಸರಾ ಯಶಸ್ಸು ಕಂಡಿರುವದಾಗಿ ಸ್ವಾಗತ ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ನುಡಿದರು.
ಅತ್ಯುತ್ತಮ ದಸರಾ: ನಂದೀಶ್
ಈ ಬಾರಿಯ ದಸರಾ ಅತ್ಯುತ್ತಮ ರೀತಿಯಲ್ಲಿ ನಡೆದಿದೆ. ನಗರದೆಲ್ಲೆಡೆ ಅಲಂಕಾರವೂ ಗಮನ ಸೆಳೆಯುವಂತಿತ್ತು ಎಂದು ಅಲಂಕಾರ ಸಮಿತಿಗೆ ಇದು ಸಂತಸ ಮೂಡಿಸಿರುವದಾಗಿ ಸಮಿತಿ ಅಧ್ಯಕ್ಷ ನಂದೀಶ್ ಅನಿಸಿಕೆ ವ್ಯಕ್ತಪಡಿಸಿದರು.
ಜನಪದ ಪರಿಷತ್ ಹೆಜ್ಜೆ ಯಶಸ್ಸು: ಅನಂತ ಶಯನ
ಕೊಡಗಿನ ಮೂಲ ಸಂಸ್ಕøತಿ, ನೆಲೆಯೇ ಜಾನಪದವಾಗಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನಪದ ಪರಿಷತ್ ಈ ವರ್ಷ ಪ್ರಥಮ ಬಾರಿಗೆ ದಸರಾ ಸಂದರ್ಭ ಈ ಪ್ರಯತ್ನ ನಡೆಸಿದ್ದು ಇದು ಒಂದು ರೀತಿಯಲ್ಲಿ ಕರ್ತವ್ಯವೂ ಆಗಿದೆ. ಈ ಬಾರಿಯ ಪ್ರಯತ್ನ ಯಶಸ್ಸು ಕಂಡಿರುವ ತೃಪ್ತಿಯಿರುವದಾಗಿ ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತ ಶಯನ ಅಭಿಪ್ರಾಯಪಟ್ಟರು.
ಉತ್ತಮ ರೀತಿಯ ಆಯೋಜನೆ: ರಮೇಶ್
ಈ ಬಾರಿಯ ದಸರಾದ ಬಗ್ಗೆ ಯಾವದೇ ಕಪ್ಪುಚುಕ್ಕೆ ಇಲ್ಲ. ಸುವ್ಯವಸ್ಥಿತವಾಗಿ ಕಾರ್ಯಕ್ರಮ ಜರುಗಿದೆ. ವೇದಿಕೆಯೂ ಆಕರ್ಷಣೀಯವಾಗಿತ್ತು. ನಿಗದಿತ ಅನುದಾನಕ್ಕೆ ಸಮರ್ಪಕವಾದ ಕಾರ್ಯಕ್ರಮ ಜರುಗಿರುವದಾಗಿ ವೇದಿಕೆ ಸಮಿತಿ ಅಧ್ಯಕ್ಷರಾದ ರಮೇಶ್ ಅಭಿಪ್ರಾಯಪಟ್ಟರು.
ಯಶಸ್ವಿ ಯುವ ದಸರಾ: ಪ್ರಭು ರೈ
ಈ ಬಾರಿಯ ಯುವ ದಸರಾ ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಯಾವದೇ ಗೊಂದಲ, ಅಡಚಣೆ ಇಲ್ಲದಂತೆ ಕಡಿಮೆ ಬಜೆಟ್‍ನಲ್ಲೂ ದಾನಿಗಳ ನೆರವಿನಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲಾ ತಂಡಗಳಿಗೂ ಸೂಕ್ತ ಬಹುಮಾನವನ್ನೂ ನೀಡಲಾಗಿದೆ. ಎಲ್ಲರ ಸಹಕಾರವೂ ತಂಡಕ್ಕೆ ದೊರೆತಿದೆ ಎಂದು ಯುವ ದಸರಾ ತ್ರಿಡಿ ತಂಡದ ಅಧ್ಯಕ್ಷ ಪ್ರಭು ರೈ ಅನಿಸಿಕೆ ವ್ಯಕ್ತಪಡಿಸಿದರು.
ಗೊಂದಲಗಳು ಬರಬಾರದು: ರವಿಕುಮಾರ್
ದಸರಾ ಉತ್ಸವದಲ್ಲಿ ಮುಖ್ಯವಾಗಿರುವದು ನಾಲ್ಕು ಶಕ್ತಿ ದೇವತೆಗಳ ಕರಗ ಆಚರಣೆಯಾಗಿದ್ದು, ಇದು ಶಾಸ್ತ್ರೋಕ್ತವಾಗಿ, ಸಂಪ್ರದಾಯ ಬದ್ಧವಾಗಿ ನಡೆದಿದೆ. ಇದಕ್ಕೆ ಸಾಕಷ್ಟು ವರ್ಷಗಳ ಇತಿಹಾಸವಿದ್ದು, ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಲಾಗಿದೆ. ಇದರಂತೆ ದಶಮಂಟಪಗಳ ವಿಚಾರದಲ್ಲೂ ಭವಿಷ್ಯದಲ್ಲಿ ಗೊಂದಲ ಬರಬಾರದು. ಸಾರ್ವತ್ರಿಕ ಆಚರಣೆ ಮುಂದುವರಿಯಬೇಕು ಎಂದು ಕರಗ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್ ನುಡಿದರು.