ಮಡಿಕೇರಿ, ಅ. 16: ರಾಜ್ಯದ ವಿವಿಧ ಭಾಷಾ ಅಕಾಡೆಮಿಗಳಿಗೆ ರಾಜ್ಯ ಸರಕಾರ ನಿನ್ನೆ ಅಧ್ಯಕ್ಷರು-ಸದಸ್ಯರುಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಕೊಡಗು ಜಿಲ್ಲೆಯ ಮಟ್ಟಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಕಾರ್ಯವ್ಯಾಪ್ತಿ ಹೊಂದಿರುವ ಅರೆಭಾಷಾ ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿವೆ.ಈ ಎರಡು ಅಕಾಡೆಮಿಗಳ ಅಧ್ಯಕ್ಷಗಾದಿ ಹಾಗೂ ಸದಸ್ಯತ್ವಕ್ಕೆ ತೆರೆಮರೆಯಲ್ಲಿ ಈತನಕ ತೀವ್ರ ಕಸರತ್ತು ನಡೆದಿತ್ತು. ಆದರೆ ಪ್ರಸ್ತುತ ಘೋಷಣೆಯಾಗಿರುವ ಪದಾಧಿಕಾರಿಗಳ ಪಟ್ಟಿಯನ್ನು ಗಮನಿಸಿದರೆ ಇದೊಂದು ಅಚ್ಚರಿದಾಯಕ ಬೆಳವಣಿಗೆಯಾಗಿದೆ. ಎರಡೂ ಅಕಾಡೆಮಿಗಳ ಅಧ್ಯಕ್ಷ ಸ್ಥಾನದ ಆಯ್ಕೆಯ ಬಗ್ಗೆ ಬಹುಶಃ ಯಾರೂ ನಿರೀಕ್ಷೆಯನ್ನೇ ಮಾಡಿರಲಿಲ್ಲ ಎನ್ನಬಹುದಾಗಿದೆ.ಈ ಹಿಂದೆ ವರದಿಯಾಗಿದ್ದಂತೆ ಕೊಡವ ಅಕಾಡೆಮಿಯ ಅಧ್ಯಕ್ಷ ಸ್ಥಾನದ ಪಟ್ಟಿಯಲ್ಲಿ ಪ್ರೊ. ಇಟ್ಟೀರ ಬಿದ್ದಪ್ಪ, ನಾಪಂಡ ರವಿಕಾಳಪ್ಪ, ಮೂಕೋಂಡ ಬೋಸ್ ದೇವಯ್ಯ, ಎಂ.ಬಿ. ಅಭಿಮನ್ಯುಕುಮಾರ್ ಸೇರಿದಂತೆ ಇನ್ನು ಕೆಲವರ ಹೆಸರು ಕೇಳಿ ಬಂದಿತ್ತು.ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸ್ಥಾನದ ಪಟ್ಟಿಯಲ್ಲೂ ತಳೂರು ಕಿಶೋರ್ ಕುಮಾರ್, ಸೂರ್ತಲೆ ಸೋಮಣ್ಣ, ಪೈಕೇರ ಮನೋಹರ್ ಮಾದಪ್ಪ, ಪದ್ಮ ಕೊಲ್ಚಾರ್ ಸೇರಿದಂತೆ ಹಲವರ ಹೆಸರು ಚಲಾವಣೆಯಲ್ಲಿತ್ತು. ಆಯಾ ಭಾಷಿಕ ಜನಾಂಗದವರ ನಿರೀಕ್ಷೆಯಂತೆ ಇವರಲ್ಲೇ ಯಾರಾದರೊಬ್ಬರಿಗೆ ಅವಕಾಶ ಸಿಗುತ್ತದೆ ಎಂಬ ಭಾವನೆ ಎಲ್ಲರಲ್ಲಿತ್ತು.

(ಮೊದಲ ಪುಟದಿಂದ) ಆದರೆ ನಿನ್ನೆ ರಾಜ್ಯ ಸರಕಾರ ಪ್ರಕಟಿಸಿದ ಪಟ್ಟಿಯಲ್ಲಿ ಎರಡೂ ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡಿರುವ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಗೂ ಲಕ್ಷ್ಮೀ ನಾರಾಯಣ ಕಜೆಗದ್ದೆ ಇವರುಗಳು ಒಂದು ರೀತಿಯಲ್ಲಿ ಎಲ್ಲರಿಗೂ ಅಚ್ಚರಿದಾಯಕವಾದ ಆಯ್ಕೆ ಎನ್ನಬಹುದು. ಇನ್ನು ಅಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳಾಗಿದ್ದ ಕೊಡವ ಅಕಾಡೆಮಿಯ ನಾಪಂಡ ರವಿ ಕಾಳಪ್ಪ ಹಾಗೂ ಅರೆಭಾಷಾ ಅಕಾಡೆಮಿಯ ಸೂರ್ತಲೆ ಸೋಮಣ್ಣ ಅವರುಗಳು ಕೇವಲ ಸದಸ್ಯರುಗಳಾಗಿ ಮಾತ್ರ ಅವಕಾಶ ಪಡೆದಿರುವದು ಇಲ್ಲಿ ಗಮನಾರ್ಹವಾಗಿದೆ.

ಎರಡೂ ಅಕಾಡೆಮಿಗಳಿಗೆ ಈ ಹಿಂದಿನ ವರ್ಷಗಳಲ್ಲಿ ಓರ್ವ ಅಧ್ಯಕ್ಷರು ಹಾಗೂ ತಲಾ 12 ಸದಸ್ಯರ ಆಯ್ಕೆ ಏಕಕಾಲಕ್ಕೆ ಆಗುತಿತ್ತು. ಬಳಿಕ ಮೂವರನ್ನು ನಾಮ ನಿರ್ದೇಶನ ಮಾಡಿಕೊಳ್ಳಲಾಗುತಿತ್ತು. ಆದರೆ ಈ ಬಾರಿ ಎಲ್ಲಾ ಸದಸ್ಯರುಗಳ ಆಯ್ಕೆಯೂ ನಡೆದಿಲ್ಲ. ಅಧ್ಯಕ್ಷರೊಂದಿಗೆ ಕೊಡವ ಅಕಾಡೆಮಿಗೆ ಏಳು ಸದಸ್ಯರು ಹಾಗೂ ಅರೆಭಾಷಾ ಅಕಾಡೆಮಿಗೆ ಅಧ್ಯಕ್ಷರೊಂದಿಗೆ ಇತರ ಆರು ಮಂದಿಯನ್ನು ಮಾತ್ರ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿರುವದು ಕುತೂಹಲ ಮೂಡಿಸಿದೆ.

ಇತರ ಅಕಾಡೆಮಿಯಲ್ಲಿ ಮೂವರಿಗೆ ಸ್ಥಾನ

ಕೊಡವ ಹಾಗೂ ಅರೆಭಾಷಾ ಅಕಾಡೆಮಿ ಹೊರತು ಪಡಿಸಿ ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಜನಪದ ಅಕಾಡೆಮಿಗೆ ಜಿಲ್ಲೆಯ ಒಟ್ಟು ಮೂವರು ಅವಕಾಶ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿಯಲ್ಲಿ ಜಿಲ್ಲೆಯ ಮೂಲದವರಾದ ಪತ್ರಕರ್ತ ಮಾನಿಪಂಡ ಸಂತೋಷ್ ತಮ್ಮಯ್ಯ ಸದಸ್ಯರಾಗಿದ್ದರೆ, ಜನಪದ ಅಕಾಡೆಮಿಯಲ್ಲಿ ಚಟ್ಟಕುಟ್ಟಂಡ ಡಾ. ಅನಂತ ಸುಬ್ಬಯ್ಯ ಹಾಗೂ ಕುಡಿಯರ ಬೋಜಕ್ಕಿ ಅವರುಗಳು ನೇಮಕಗೊಂಡಿದ್ದಾರೆ.

ಇತರ ಅಕಾಡೆಮಿಗಳು ಸೇರಿದಂತೆ ಕೊಡವ ಹಾಗೂ ಅರೆಭಾಷೆ ಅಕಾಡೆಮಿಗೆ ಪೂರ್ಣ ಪ್ರಮಾಣದಲ್ಲಿ ಸದಸ್ಯರ ಆಯ್ಕೆ ಆಗದಿರುವದು ಕುತೂಹಲ ಮುಂದುವರಿಸಿದಂತಾಗಿದ್ದು, ಮುಂದಿನ ಬೆಳವಣಿಗೆಯ ಬಗ್ಗೆ ಕಾದು ನೋಡಬೇಕಿದೆ.