ಮಡಿಕೇರಿ, ಅ.16: ಮಡಿಕೇರಿಯಲ್ಲಿ ತಾ.18 ರಿಂದ 20 ರವರೆಗೆ ಮೂರು ದಿನಗಳ ಕಾಲ ದಕ್ಷಿಣ ಭಾರತ ಮನೋವೈದ್ಯರ 52ನೇ ಸಮ್ಮೇಳನ ಆಯೋಜಿತವಾಗಿದ್ದು, ದೇಶವ್ಯಾಪಿಯ 850ಕ್ಕೂ ಅಧಿಕ ಮನೋವೈದ್ಯರು ಪಾಲ್ಗೊಳ್ಳಲಿದ್ದಾರೆ.

ದಕ್ಷಿಣ ಭಾರತ ಮನೋವೈದ್ಯರ ಸಂಘವು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಸಮಾವೇಶ ಆಯೋಜಿಸುತ್ತಿದೆ. ತಾ.18ರಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬೆಳಿಗ್ಗೆ 9.30 ಗಂಟೆಗೆ ಸಮಾವೇಶ ಉದ್ಘಾಟನೆಯಾಗಲಿದೆ. ಈ ಸಮಾವೇಶದಲ್ಲಿ ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರ, ತೆಲಂಗಾಣ ರಾಜ್ಯಗಳಿಗೆ ಸೇರಿದ ಮನೋವೈದ್ಯರು ಮತ್ತು ದೇಶದ ವಿವಿಧೆಡೆಗಳ ಹೆಸರಾಂತ ಮನೋವೈದ್ಯರು ಪಾಲ್ಗೊಳ್ಳುತ್ತಿದ್ದಾರೆ.

ಪ್ರಕೃತಿ ವಿಕೋಪ ಪೀಡಿತ ಕೊಡಗು ಜಿಲ್ಲೆಗೆ ಆರ್ಥಿಕ ಸಬಲತೆ ನೀಡಿಕೆ, ಗ್ರಾಮೀಣ ಪ್ರದೇಶದಲ್ಲಿ ಜನರ ಮನೋಸಮಸ್ಯೆಗಳ ಬಗ್ಗೆ ಚರ್ಚೆಯನ್ನು ಒಳಗೊಂಡಿರುವ ಈ ಸಮಾವೇಶ ಯುವಪೀಳಿಗೆಯಲ್ಲಿ ಹೆಚ್ಚುತ್ತಿರುವ ಮಾನಸಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ಹೊಂದಿದೆ.

ಈಗಾಗಲೇ ಮಡಿಕೇರಿ ನಗರ ಹಾಗೂ ಮಡಿಕೇರಿ ವ್ಯಾಪ್ತಿಯಲ್ಲಿ 550 ಕ್ಕೂ ಅಧಿಕ ವಸತಿ ಗೃಹಗಳನ್ನು ಸಮ್ಮೇಳನದ ಪ್ರತಿನಿಧಿಗಳಿಗೆ ಕಾಯ್ದಿರಿಸಲಾಗಿದ್ದು ಕೊಡಗು ಪ್ರವಾಸೋದ್ಯಮಕ್ಕೂ ಮನೋವೈದ್ಯರ ಬೃಹತ್ ಸಮಾವೇಶ ಚೈತನ್ಯ ನೀಡಲಿದೆ ಎಂದು ದಕ್ಷಿಣ ಭಾರತ ಮನೋವೈದ್ಯರ ಸಂಘದ ಅಧ್ಯಕ್ಷರಾಗಿರುವ ಡಾ.ಎ.ಜಗದೀಶ್ ಹಾಗೂ ಕಾರ್ಯದರ್ಶಿ ಡಾ. ಮಹೇಶ್‍ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.