ಚೆಟ್ಟಳ್ಳಿ, ಅ. 16 : ವೀರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೊಂಡಂಗೇರಿಯ ಜನತೆ ತಮ್ಮ ತಿಂಗಳ ವಿದ್ಯುತ್ ಬಿಲ್ ನೋಡಿ ಅಚ್ಚರಿಗೊಂಡಿದ್ದಾರೆ.
ಕೊಂಡಂಗೇರಿಯ ಬಹುತೇಕರಿಗೆ ತಿಂಗಳಿಗೆ ಒಂಭತ್ತು ಲಕ್ಷ, ಎರಡು ಲಕ್ಷ, ಒಂದು ಲಕ್ಷ, ತೊಂಬತ್ತು ಸಾವಿರ ಹೀಗೆ ಲಕ್ಷಗಟ್ಟಲೇ ವಿದ್ಯುತ್ ಬಿಲ್ ಬಂದದ್ದು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೊಂಡಂಗೇರಿ ಗ್ರಾಮಸ್ಥ ಅಬ್ದುರಹಮಾನ್ ನಾವು ತಿಂಗಳಿಗೆ ಸರಿಯಾಗಿ ವಿದ್ಯುತ್ ಬಿಲ್ ಪಾವತಿಸುತ್ತಾ ಬಂದಿದ್ದು, ಇದುವರೆಗೆ ಯಾವದೇ ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಲ್ಲ. ಈಗ ನಮಗೆ ಬಂದಿರುವ ಬಿಲ್ ನೋಡಿ ನಮಗೆ ಆಘಾತವಾಗಿದ್ದು, ಇದನ್ನು ಕೂಡಲೇ ಸರಿಪಡಿಸದೇ ಇದ್ದಲ್ಲಿ ಚೆಸ್ಕಾಂ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಲಾಗುವದು ಎಂದು ಎಚ್ಚರಿಸಿದ್ದಾರೆ.
ಕೊಂಡಂಗೇರಿ ಗ್ರಾಮ ಆಗಸ್ಟ್ ನಲ್ಲಿ ಸಂಬಂಧಿಸಿದ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಇದೀಗ ಚೇತರಿಸಿಕೊಂಡು ಬರುತ್ತಿದ್ದು, ಚೆಸ್ಕಾಂ ನಮಗೆ ನೀಡಿರುವ ವಿದ್ಯುತ್ ಬಿಲ್ ನೋಡಿ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿಯಾಗಿದೆ ಎಂದು ಕೊಂಡಂಗೇರಿ ಗ್ರಾಮಸ್ಥ ಹಾರಿಸ್ ಹೇಳಿದ್ದಾರೆ.
ಪ್ರಕೃತಿ ವಿಕೋಪ ಸಂಭವಿಸಿ ದಾಗಲೂ ನಾವು ಸರಿಯಾಗಿ ತಿಂಗಳಿಗೆ ವಿದ್ಯುತ್ ಬಿಲ್ ಪಾವತಿಸಿ ದ್ದೇವೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಹಾರಿಸ್ ಒತ್ತಾಯ ಮಾಡಿದರು.