ಪಾಲಿಬೆಟ್ಟ, ಅ. 16: ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಮಾರೋಪ ಸಮಾರಂಭವನ್ನು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಧೋಶ್ ಪೂವಯ್ಯ ಉದ್ಘಾಟಿಸಿ ಮಾತನಾಡಿ, ಶಿಬಿರಾರ್ಥಿಗಳು ಮುಂದಿನ ಜೀವನದಲ್ಲಿ ಏನಾದರೂ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಇಂತಹ ಶಿಬಿರದ ಅವಶ್ಯಕತೆ ಇದ್ದು ಉತ್ತಮ ಶಿಕ್ಷಣದೊಂದಿಗೆ ಶುಚಿತ್ವವನ್ನು ಕಾಪಾಡಲು ಸಾಧ್ಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ ಮಾತನಾಡಿ, ಎನ್‍ಎಸ್‍ಎಸ್ ಶಿಬಿರಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ನೆರವಾಗುತ್ತದೆ. ಶಿಬಿರಾರ್ಥಿಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಆದರ್ಶ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡರೆ ಸಮಾಜಮುಖಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ಶಿಬಿರಾರ್ಥಿಗಳು ಪಡೆದುಕೊಂಡ ಉತ್ತಮ ಗುಣಗಳನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶಿಬಿರಾರ್ಥಿಗಳು ಸದಾ ಶಿಸ್ತಿನ ಸಿಪಾಯಿಗಳಾಗಿರಬೇಕೆಂದರು. ಶಿಬಿರದಲ್ಲಿ 2018ರ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆದ ಸಂಜೀವ ಎಂಬ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಏಳು ದಿನದ ಶಿಬಿರದಲ್ಲಿ ಶಿಬಿರಾರ್ಥಿಗಳು ಯೋಗ ಮತ್ತು ಫುಟ್‍ಬಾಲ್ ತರಬೇತಿ ಪಡೆದರು. ಶಿಬಿರಾರ್ಥಿನಿಯರು ತಿರುವಾದಿರ ಮತ್ತು ಉಮ್ಮತ್ತಾಟ್ ನೃತ್ಯ ಪ್ರದರ್ಶಿಸಿದರು. ಶಿಬಿರಾರ್ಥಿನಿಯರು ಭಾರತಾಂಬೆಯ ನಕ್ಷೆಗೆ ದೀಪ ಇಟ್ಟು ಬೆಳಗಿ ಬಲಿಷ್ಠ ಭಾರತವನ್ನು ನಿರ್ಮಿಸುತ್ತೇವೆ ಎಂದು ಪ್ರತಿಜ್ಞೆಗೈದರು. ಪ್ರಾಂಶುಪಾಲೆ ಡಾ. ಭವಾನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಟ್ಟಂಡ ವಸಂತ್ ಉಪಸ್ಥಿರಿದ್ದರು. ಶಿಬಿರದ ಅಧಿಕಾರಿ ಶಿವದಾಸ್ ಹಾಗೂ ಸಹ ಅಧಿಕಾರಿ ಸುನೀತ ಕಾರ್ಯನಿರ್ವಹಿಸಿದರು.