ವೀರಾಜಪೇಟೆ, ಅ. 16: ಮೂರು ತಿಂಗಳ ಹಿಂದೆ ಬಿದ್ದ ಭಾರೀ ಮಳೆಯಿಂದ ತೋರ ಗ್ರಾಮದಲ್ಲಿ ಸಂಭವಿಸಿದ ದುರಂತ ತುಂಬಾ ನೋವುಂಟು ಮಾಡಿದೆ. ಉತ್ತಮ ಪರಿಸರದಲ್ಲಿರುವ ಕೊಡಗಿನಲ್ಲಿ ಇಂತಹ ದುರಂತಗಳು ಸಂಭವಿಸಿದ್ದು ವಿಷಾದನೀಯ ಎಂದು ನೇಪಾಳದಲ್ಲಿ ಭಾರತದ ಕನ್ಸುಲೇಟ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಐ.ಎ.ಎಸ್. ಅಧಿಕಾರಿ ಡಾ. ಕೊಟ್ರುಸ್ವಾಮಿ ಹೇಳಿದರು.

ತೋರ ಗ್ರಾಮದ ಸಂತ್ರಸ್ತರಾದ ಪ್ರಭು, ಪರಮೇಶ್, ಭಾಗ್ಯಶ್ರೀ, ಲಿಂಗಯ್ಯ ಕುಟುಂಬಗಳಿಗೆ ರೂ. 55000 ನಗದು ಹಣವನ್ನು ವಿತರಿಸಿ ಮಾತನಾಡಿದ ಡಾ. ಕೊಟ್ರುಸ್ವಾಮಿ ಅವರು ವೀರಾಜಪೇಟೆಯ ಪಶು ವೈದ್ಯ ಶಾಲೆಯಲ್ಲಿ ಆರು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದು ಕೆದಮುಳ್ಳೂರು ವಿಭಾಗದ ತೋರ, ಪಾಲಂಗಾಲ ಇತರೆಡೆಗಳಲ್ಲಿ ಸೇವೆಯ ಸಂಪರ್ಕವನ್ನಿಟ್ಟುಕೊಂಡಿದ್ದರಿಂದ ದುರಂತದಿಂದ ಮರುಕ ಉಂಟಾಗಿದೆ. ದುರಂತದ ಸಂತ್ರಸ್ತರನ್ನು ನೋಡಿ ಸಾಂತ್ವನ ಹೇಳುವದಕ್ಕಾಗಿ ಕೆದಮುಳ್ಳೂರು ಗ್ರಾಮಕ್ಕೆ ಭೇಟಿ ನೀಡಿರುವದಾಗಿ ತಿಳಿಸಿದರು.

ಇದೇ ಸಂದರ್ಭ ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಿರೀಕ್ಷೆ ಇಲ್ಲದ ರೀತಿಯಲ್ಲಿ ಭಾರೀ ಮಳೆಯಿಂದ ತೋರ ಗ್ರಾಮದಲ್ಲಿ ಪ್ರಕೃತಿ ವಿಕೋಪದಿಂದ ದುರಂತ ಸಂಭವಿಸಿದೆ. ಇನ್ನು ಮುಂದೆ ಕೊಡಗಿನಲ್ಲಿ ಇಂತಹ ದುರಂತಗಳು ಸಂಭವಿಸದಂತೆ ಭಗವಂತನನ್ನು ಪ್ರಾರ್ಥಿಸೋಣ ಎಂದರು. ತಾಲೂಕು ಪಂಚಾಯಿತಿ ಸದಸ್ಯ ಎಂ. ಪ್ರಶಾಂತ್, ವೀರಾಜಪೇಟೆ ಪಶು ವೈದ್ಯಾಧಿಕಾರಿ ಡಾ. ಶಾಂತೇಶ್, ಡಾ. ಸಂತೋಷ್, ಬೆಳೆಗಾರ ರಾಮಪ್ರಸಾದ್, ಸುಬ್ಬಯ್ಯ ಉಪಸ್ಥಿರಿದ್ದರು.