ವೀರಾಜಪೇಟೆ, ಅ. 15: ವೀರಾಜಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಸೊಡ್ಲೂರು ಪೈಸಾರಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸು ತ್ತಿರುವ ಸುಮಾರು 74 ಕುಟುಂಬಗಳು ಮೂಲ ಸೌಲಭ್ಯಗಳಿಂದ ವಂಚಿತ ವಾಗಿದ್ದು, ಮುಂದಿನ 15 ದಿನಗಳೊಳಗೆ ಗ್ರಾಮ ಪಂಚಾಯಿತಿ ಯಾಗಲಿ, ತಾಲೂಕು ಅಥವಾ ಜಿಲ್ಲಾಡಳಿತ ಗಿರಿಜನರಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅವಶ್ಯಕ ಮೂಲ ಸೌಲಭ್ಯಗಳನ್ನು ಒದಗಿಸದಿದ್ದರೆ ಹುದಿಕೇರಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಅನಿರ್ಧಿಷ್ಟ ಕಾಲದವರಗೆ ಧರಣಿ ಮುಷ್ಕರ ಹಮ್ಮಿಕೊಳ್ಳಲಾಗುವದು ಎಂದು ಸಂಘಟನೆಯ ವಿಭಾಗೀಯ ಸಂಚಾಲಕ ಹೆಚ್.ಎಸ್. ಕೃಷ್ಣಪ್ಪ ತಿಳಿಸಿದರು.
ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೃಷ್ಣಪ್ಪ, 74 ಕುಟುಂಬಗಳಿಗಾಗಿ ಸರಕಾರದ ನೀರು ಪೊರೈಕೆ ಯೋಜನೆಯಲ್ಲಿ ಬೋರ್‍ವೆಲ್ ಸೌಲಭ್ಯ ಒದಗಿಸಲು ನಿಯಮಾವಳಿ ಇದ್ದರೂ ಅಧಿಕಾರಿಗಳು ಸಲ್ಲದ ನೆಪಹೇಳಿ ಕಾಲಹರಣ ಮಾಡುತ್ತಿದ್ದಾರೆ.
ಬೋರ್‍ವೆಲ್ ಕಾಮಗಾರಿಗೂ ನಿರಪೇಕ್ಷಣಾ ಪತ್ರ ನೀಡುತ್ತಿಲ್ಲ. ಸಂಘಟಕರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನಾಧಿಕಾರಿ ಯವರನ್ನು ಕೇಳಿದರೆ ತಾಲೂಕು ಪಂಚಾಯಿತಿ ಅಧಿಕಾರಿ ಇಲ್ಲವೇ ಜಿಲ್ಲಾಡಳಿತದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಕೇಳಬೇಕು ಎಂದು ಸಬೂಬು ನೀಡುತ್ತಿದ್ದಾರೆ ಎಂದು ದೂರಿದರು.
ಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಪರಶುರಾಮ, ಡಿ.ಎಸ್.ಎಸ್.ನ ಸಂಘಟನಾ ಸಂಚಾಲಕ ವಿ.ಆರ್. ರಜನಿಕಾಂತ್, ತಾಲೂಕು ಸಂಘಟನಾಧಿಕಾರಿ ವಸಂತ್, ಗಣೇಶ್ ಮತ್ತಿತರರು ಹಾಜರಿದ್ದರು.