ಕೂಡಿಗೆ, ಅ. 15: ಸೋಮವಾರಪೇಟೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕುಶಾಲನಗರ ಪಟ್ಟಣ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಕುಶಾಲನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಡೆಯಿತು.ಹಾರಂಗಿ ರಸ್ತೆಯಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್. ಮಂಜುಳಾ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಾಲ್ಮೀಕಿ ಮೂಲತಃ ಹುತ್ತದಿಂದ ಹೊರ ಬಂದವರು. ಹುತ್ತದಲ್ಲಿ ಕುಳಿತು ವಿಶೇಷವಾದ ಆಧ್ಯಾತ್ಮಿಕ ಶಕ್ತಿ ಪಡೆದು ನಂತರದಲ್ಲಿ ಹೊರ ಬಂದು ರಾಮಾಯಣ ಕೃತಿ ರಚಿಸಿದರು. ಅದು ವಿಶ್ವಕ್ಕೆ ಮಾದರಿಯಾದ ಜೀವನ ಸಂದೇಶವನ್ನು ನೀಡಿದೆ ಎಂದರು.
ಮುಖ್ಯ ಭಾಷಣ ಮಾಡಿದ ಪಿರಿಯಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವರಾಜ್, ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗುತ್ತದೆ. ಉತ್ತಮ ಸಮಾಜ ನಿರ್ಮಾಣ ಮಾಡಲು ರಾಮಾಯಣವನ್ನು ನೀತಿಯ ಸಂದೇಶ ಸಾರಲೆಂದೇ ಇಂದಿಗೂ ಅಧ್ಯಯನ ಮಾಡಬಹುದು. ರಾಮಾಯಣದಲ್ಲಿ ವಾಲ್ಮೀಕಿ ಮಹರ್ಷಿಗಳು ಅಂದಿನ ಸಮಾಜದ ನೀತಿ ಸೂತ್ರಗಳನ್ನು ವಿಶದೀಕರಿಸಿದ್ದರೂ, ಇಂದಿಗೂ ಆ ವಿಚಾರಗಳು ಪ್ರಚಲಿತವಾಗಿವೆ. ವಾಲ್ಮೀಕಿ ಮಹರ್ಷಿಗಳು ತಮ್ಮ ಕಾವ್ಯದಲ್ಲಿ ಅಯೋಧ್ಯೆಯ ಮಾನವ ಸಂಬಂಧಗಳನ್ನು, ಕಿಷ್ಕಿಂದೆಯ ವಾನರ ಸಂಬಂಧಗಳನ್ನು ಮತ್ತು ಲಂಕೆಯ ರಾಕ್ಷಸಿಯ ಸಂಬಂಧಗಳನ್ನು ಅಳವಡಿಸಿ ಸುಂದರವಾದ ರೀತಿಯಲ್ಲಿ ಕಥಾಹಂದರವನ್ನು ಸೃಷ್ಟಿಸಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎನ್. ಅಶೋಕ್ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಾಲ್ಮೀಕಿ ಸಮಾಜದ ಉಪಾಧ್ಯಕ್ಷರಾದ ಶಿವಾನಂದ, ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸುನಿಲ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಖರ್, ಹಿಂದುಳಿದ ವರ್ಗಗಳ ಇಲಾಖೆಯ ಶಿಕ್ಷಣ ಸಂಯೋಜಕ ಅಧಿಕಾರಿ ಶ್ರೀಕಾಂತ್, ಕಂದಾಯ ನಿರೀಕ್ಷಕರಾದ ಮಧುಸೂದನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಆಯೆಷಾ ಉಪಸ್ಥಿತರಿದ್ದರು.