ಮಡಿಕೇರಿ, ಅ. 15: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಎನ್ಸಿಸಿ, ಎನ್.ಎಸ್. ಎಸ್., ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಯೂನಿಸೆಫ್ ಸಹಕಾರದಲ್ಲಿ ನಡೆಯಿತು.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿ.ಪಂ. ಸಿಇಒ ಅವರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿತ್ತು, ಎನ್ಸಿಸಿ, ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶಿಕ್ಷಕರು, ಎನ್ಜಿಒಗಳು, ಜನಪ್ರತಿ ನಿಧಿಗಳು, ಎನ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಗೃಹ ರಕ್ಷಕದಳ ಹೀಗೆ ಎಲ್ಲರೂ ಜಿಲ್ಲಾಡಳಿತದ ಜೊತೆ ಕೈಜೋಡಿಸಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರನ್ನು ರಕ್ಷಿಸುವಲ್ಲಿ ಸಹಕರಿಸಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಸುಮನ್ ಡಿ.ಪಿ., ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಎನ್ಸಿಸಿ, ಎನ್.ಎಸ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಹಕಾರವನ್ನು ಸ್ಮರಿಸಿದರು.
ಎನ್ಸಿಸಿ ಅಧಿಕಾರಿ ಮೇಜರ್ ರಾಘವ ಮಾತನಾಡಿ ಎನ್ಸಿಸಿ ಮತ್ತು ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ನ ವಿದ್ಯಾರ್ಥಿಗಳು ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿಲ್ಲಾಡಳಿತ ಜೊತೆ ಸೇರಿ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸಿದ್ದಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವದು ಅತ್ಯಗತ್ಯ. ಆ ನಿಟ್ಟಿನಲ್ಲಿ ಈ ಸಂಸ್ಥೆಗಳು ಕಾರ್ಯನಿರ್ವಹಿಸಿವೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ನ ಆಯುಕ್ತ ಕಿಟ್ಟು ಕಾಳಪ್ಪ ಮಾತನಾಡಿ, ಪ್ರಕೃತಿ ವಿಕೋಪ ತಡೆಯುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ನೆಡಬೇಕಿದೆ. ಅಂತರ್ಜಲವನ್ನು ಉಳಿಸಬೇಕಿದೆ ಎಂದರು. ಎನ್ಎಸ್ಎಸ್ ಅಧಿಕಾರಿ ವನಿತ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ಮೊದಲೇ ನಿಯೋಜಿಸಬೇಕಿದೆ. ಹಾಗೆಯೇ ಪರಿಹಾರ ಕೇಂದ್ರದಲ್ಲಿ ಸೋಪು, ಟೂತ್ ಪೇಸ್ಟ್, ಟವಲ್ ಮತ್ತಿತರ ಅಗತ್ಯ ಸಾಮಗ್ರಿ ಒಳಗೊಂಡ ‘ಸಣ್ಣ ಸಾಮಗ್ರಿ ಕಿಟ್’ ಸಿದ್ಧತೆ ಮಾಡಿಕೊಂಡು ಪೂರೈಸುವದು ಅತ್ಯಗತ್ಯ ಎಂದು ಸಲಹೆ ನೀಡಿದರು.
ಯುನಿಸೆಫ್ನ ಸಮನ್ವಯಾಧಿ ಕಾರಿ ಮನೋಹರ್ ಸ್ವಾಗತಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ನ ಉಷಾರಾಣಿ ನಿರೂಪಿಸಿದರು, ಎನ್ಎಸ್ಎಸ್ ಅಧಿಕಾರಿ ವನಿತ್ ಕುಮಾರ್ ವಂದಿಸಿದರು.