ವೀರಾಜಪೇಟೆ, ಅ. 15: ಬೆಂಗಳೂರಿನ ವಜ್ರ ಫಿಲಂ ಇನ್ಸಿಟ್ಯೂಟ್ನ ಸಹಕಾರದೊಂದಿಗೆ ತೇಜಸ್ ಕಲಾನಿಕೇತನ ಸಂಸ್ಥೆಯ ವತಿಯಿಂದ ಕೊಡಗು ಜಿಲ್ಲಾಮಟ್ಟದ ಗಾನಯಾನ ಮತ್ತು ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗುವದು ಎಂದು ಸಂಸ್ಥೆಯ ಅಧ್ಯಕ್ಷೆ ಕವಿತಾ ಮೋಹನ್ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ತೇಜಸ್ ಕಲಾನಿಕೇತನದಿಂದ ಕೊಡಗಿನ ಪ್ರತಿಭಾವಂತರು ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ಪ್ರತಿಭೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಗೆದ್ದವರು ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅರ್ಹರಾಗಿದ್ದು ಅಲ್ಲಿ ಗೆದ್ದವರಿಗೆ ‘ಗಾನತೇಜ’ ಎಂಬ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವದು. ಕೊಡಗಿನ ಮೂರು ತಾಲೂಕುಗಳಲ್ಲಿ ಪ್ರತ್ಯೇಕವಾಗಿ ಬೇರೆ ಬೇರೆ ದಿನಾಂಕಗಳಲ್ಲಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಿ ಅಂತಿಮವಾಗಿ ಮಡಿಕೇರಿಯಲ್ಲಿ ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ ನಡೆಯಲಿದೆ. ವಯೋಮಿತಿಯ ನಿರ್ಬಂಧವಿಲ್ಲದೆ ಪುರುಷರು, ಮಹಿಳೆಯರು, ಮಕ್ಕಳು ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಶಶಿಧರ್ ಮಾತನಾಡಿ ಮುಂದಿನ ನವೆಂಬರ್ 15 ರೊಳಗೆ ಆಸಕ್ತ ಸ್ಪರ್ಧಿಗಳು ತೇಜಸ್ ಕಲಾನಿಕೇತನ ಸಂಸ್ಥೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಪರ್ಧೆಯ ಇತರ ವಿವರಗಳನ್ನು ಶಶಿಧರ್ 9980134504 ಅಥವಾ 9480905791 ಇವರಿಂದ ಪಡೆಯಬಹುದಾಗಿದೆ ಎಂದರು.
ಗೋಷ್ಠಿಯಲ್ಲಿ ಕಲಾವಿದರಾದ ಕೆ.ಚಂದ್ರಶೇಖರ್ ಉಪಸ್ಥಿತರಿದ್ದರು.