ಕುಶಾಲನಗರ, ಅ. 15: ಕುಶಾಲನಗರ ಪಟ್ಟಣ ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಗಡಿಭಾಗದಲ್ಲಿರುವ ದೊಡ್ಡಬಂಡೆ ಕೆರೆ ಪ್ರದೇಶದಲ್ಲಿ ಅಶುಚಿತ್ವ ತಾಂಡವ ವಾಡುತ್ತಿದ್ದು ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳಿಗೆ ಸಮಸ್ಯೆಯಾಗಿ ಕಾಡತೊಡಗಿದೆ. ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ ಒಳಪಡುವ ಸರ್ವೆ ನಂ 29/1 ರಲ್ಲಿ ದೊಡ್ಡಬಂಡೆ ಬಲಮುರಿ ದೇವಾಲ ಯದ ಒತ್ತಿನಲ್ಲಿದ್ದು ಸುಮಾರು 3 ಎಕರೆ ಸರಕಾರಿ ಜಾಗ ಪರರ ಪಾಲಾಗುವದರೊಂದಿಗೆ ದಿನನಿತ್ಯ ಸುತ್ತಮುತ್ತಲಿನ ತ್ಯಾಜ್ಯ ರಾಶಿಗಳು ಈ ಬಂಡೆಯ ಒಡಲು ಸೇರುತ್ತಿದೆ.
ಬಲಮುರಿ ಗಣಪತಿ ದೇವಾಲಯದ ಸನಿಹದಲ್ಲಿ ಒಂದೆಡೆ ಗೊಂದಿಬಸವನಹಳ್ಳಿ ರಸ್ತೆ ಇನ್ನೊಂದೆಡೆ ಬಸವೇಶ್ವರ ಬಡಾವಣೆ ಮುಖ್ಯರಸ್ತೆ ನಡುವೆ ಈ ಪ್ರದೇಶ ಅಸ್ತಿತ್ವದಲ್ಲಿದ್ದು ಇದೊಂದು ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಪರಿವರ್ತನೆ ಗೊಳ್ಳುತ್ತಿದೆ. ಈ ಬಂಡೆ ತಳಭಾಗದಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹವಾಗಿದ್ದು ಭಾರೀ ಗಾತ್ರದ ಆಮೆಗಳು, ಹಾವುಗಳು, ಜಲಚರಗಳು ವಾಸವಾಗುವದರೊಂದಿಗೆ ಇತ್ತೀಚಿನ ದಿನಗಳಲ್ಲಿ ಸುತ್ತಮುತ್ತಲಿನ ಕಸದ ರಾಶಿಗಳು ಈ ಕೆರೆಯಲ್ಲಿ ತುಂಬುತ್ತಿವೆ.
ಈ ಬಗ್ಗೆ ಸಂಬಂಧಿಸಿದ ಪಂಚಾಯಿತಿ ಜನಪ್ರತಿನಿಧಿಗಳು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳಾದ ರಘು ಭಟ್, ತಿಮ್ಮಯ್ಯ ಮತ್ತು ಪರಮೇಶ್ವರ್ ಭಟ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸತ್ತ ಪ್ರಾಣಿಗಳನ್ನು ತಂದು ಇಲ್ಲಿ ಎಸೆದು ಹೋಗುತ್ತಾರೆ. ವಾಸನೆಯೊಂದಿಗೆ ಸೊಳ್ಳೆಗಳ ಆವಾಸ ಸ್ಥಾನವಾಗಿ ಇಡೀ ಪರಿಸರ ಮಲಿನಗೊಂಡು ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾ ಗುತ್ತಿದೆ ಎಂದು ದೂರಿದ್ದಾರೆ.
ಈ ದೊಡ್ಡಬಂಡೆ ಸುತ್ತಮುತ್ತಲ ಜಾಗವನ್ನು ಪಂಚಾಯಿತಿಯ ಕೆಲವು ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಅಕ್ರಮವಾಗಿ ಒತ್ತುವರಿ ಮಾಡಿ ಶೆಡ್ ನಿರ್ಮಿಸಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ದೊಡ್ಡಬಂಡೆ ಸುತ್ತಮುತ್ತ 500 ಕ್ಕೂ ಅಧಿಕ ಮನೆಗಳಿದ್ದು ಪಕ್ಕದಲ್ಲಿಯೇ ದೇವಾಲಯ ಇದ್ದು ಈ ವ್ಯಾಪ್ತಿಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವಲ್ಲಿ ಜನಪ್ರತಿನಿಧಿಗಳ ವೈಫಲ್ಯದ ಬಗ್ಗೆ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಎರಡು ಸಮುದಾಯಗಳ ಪ್ರಮುಖರು ದೊಡ್ಡಬಂಡೆ ಕೆರೆಗೆ ಮಣ್ಣು ತುಂಬಿಸುವ ಕಾರ್ಯದಲ್ಲಿದ್ದಾಗ ಕಂದಾಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದು ನಂತರ ಈ ಬಗ್ಗೆ ಯಾವದೇ ಅಭಿವೃದ್ಧಿ ಕಂಡುಬಂದಿಲ್ಲ. ಸುತ್ತಲೂ ಪೊದೆ ಬೆಳೆದಿದ್ದು ನಾಗರಿಕರ ಓಡಾಟಕ್ಕೆ ಕೂಡ ತೊಂದರೆ ಯುಂಟಾಗುತ್ತಿದೆ ಎಂದು ಬಡಾವಣೆಯ ಮಹಿಳೆಯರು ತಿಳಿಸಿದ್ದಾರೆ.
ಬಂಡೆ ಕೆಳಗೆ ಇರುವ ನೀರಿನಲ್ಲಿ ಆಮೆಗಳು, ಹಾವುಗಳು ನೆಲೆಸಿದ್ದು ಮಣ್ಣು ಕಲ್ಲು ತುಂಬಿಸುತ್ತಿರುವ ಹಿನ್ನೆಲೆ ಅವುಗಳು ಪಕ್ಕದ ಮನೆಗಳಿಗೆ ನುಗ್ಗುತ್ತಿರುವದಾಗಿ ಅಲ್ಲಿನ ನಿವಾಸಿಗಳು ತಮ್ಮ ಬವಣೆಯನ್ನು ಸ್ಥಳಕ್ಕೆ ತೆರಳಿದ ‘ಶಕ್ತಿ’ಯೊಂದಿಗೆ ತೋಡಿಕೊಂಡಿದ್ದಾರೆ. ರಾತ್ರಿ ವೇಳೆ ಓಡಾಡಲು ಕೂಡ ಭಯಸೃಷ್ಟಿ ಯಾಗಿದೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಈ ಪ್ರದೇಶವನ್ನು ಅಭಿವೃದ್ಧಿಪಡಿಸುವದರೊಂದಿಗೆ ಉದ್ಯಾನವನ ನಿರ್ಮಿಸಿ ಜನರ ಅನುಕೂಲಕ್ಕೆ ಒದಗಿಸುವಂತಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಯೋಜನೆ ರೂಪಿಸಬೇಕು ಎಂದು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
ದೊಡ್ಡಬಂಡೆಯ ಸರಕಾರಿ ಜಾಗವನ್ನು ಸರಕಾರಿ ಕೆಲಸಕ್ಕೆ ಅವಶ್ಯವಿರುವ ಕಟ್ಟಡಗಳ ನಿರ್ಮಾಣ ದೊಂದಿಗೆ ಉತ್ತಮ ಉದ್ಯಾನ ವನವೊಂದು ನಿರ್ಮಿಸಬೇಕಿದೆ ಎಂಬದು ಮುಳ್ಳುಸೋಗೆ ಗ್ರಾ.ಪಂ. ಸದಸ್ಯ ಶಿವಾನಂದ ಅವರ ಆಗ್ರಹವಾಗಿದೆ. ಆದಷ್ಟು ಬೇಗ ದೊಡ್ಡಬಂಡೆ ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳು ನಿವಾರಿಸುವಲ್ಲಿ ಕಾರ್ಯಯೋಜನೆ ರೂಪಿಸಬೇಕಾಗಿದೆ.
- ಚಂದ್ರಮೋಹನ್