ವೀರಾಜಪೇಟೆ, ಅ. 14: ಕೊಡಗು ಜಿಲ್ಲಾ ಪಂಚಾಯತ್, ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲು, ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆ ಸಹಯೋಗ ದಲ್ಲಿ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಪಶುಪಾಲಕ ತಾತಂಡ ಬಿಪಿನ್ ಅವರ ಮನೆಯಲ್ಲಿ ಚಾಲನೆ ನೀಡಲಾಯಿತು.
ಪ್ರಬಾರ ಉಪ ನಿರ್ದೇಶಕ ಡಾ. ಎ.ಬಿ. ತಮ್ಮಯ್ಯ ಮಾಹಿತಿ ನೀಡಿ ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು ತಾ. 14 ರಿಂದ ನವೆಂಬರ್ 10ರ ವರೆಗೆ ವೀರಾಜಪೇಟೆ ತಾಲೂಕಿನಾದ್ಯಂತ ನಡೆಯಲಿದೆ. ಎಲ್ಲಾ ಮೂರು ತಿಂಗಳ ದನ, ಎಮ್ಮೆ, ಹಂದಿಗಳಿಗೆ ಕಾಲು ಬಾಯಿ ಜ್ವರ ಬಾರದಂತೆ ಲಸಿಕೆ ಹಾಕಿ ತಡೆಗಟ್ಟುವ ಕಾರ್ಯಕ್ರಮ ವಾಗಿದೆ. ತಾಲೂಕಿನಲ್ಲಿ ಒಟ್ಟು 4 ತಂಡಗಳನ್ನು ರಚಿಸಲಾಗಿದ್ದು, ಇಲಾಖೆಯ 24 ಲಸಿಕಾದಾರರು ಮನೆಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ. ಈ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದೆ.
ರಾಷ್ಟ್ರದಲ್ಲಿ ಈ ಕಾಯಿಲೆಯಿಂದ ವಾರ್ಷಿಕ 50 ಸಾವಿರ ಕೋಟಿ ನಷ್ಟವಾಗುತ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಇದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಭಿಯಾನ ಕಾರ್ಯಕ್ರಮದಲ್ಲಿ ಬಿಟ್ಟು ಹೋದ ರಾಸುಗಳಿದ್ದರೆ ಕೂಬಿಂಗ್ ಕಾರ್ಯಕ್ರಮ ನಡೆಸಿ ಲಸಿಕೆ ಹಾಕಲಾಗುವದು ಎಂದು ಮಾಹಿತಿ ನೀಡಿದರು.
ಲಸಿಕಾ ಕಾರ್ಯಕ್ರಮಕ್ಕೆ ಕದನೂರು ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಚಾಲನೆ ನೀಡಿದರು. ಇದೇ ಸಂಧರ್ಭ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟೇರಿರ ಪ್ರೇಮ್‍ನಾಣಯ್ಯ, ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪದ ಡಾ ಸುರೇಶ್, ಡಾ. ಲತಾ, ಡಾ. ಶಾಂತೇಶ್, ಗ್ರಾಮಸ್ಥರಾದ ತಾತಂಡ ಕಬೀರ್, ಸೋಮಣ್ಣ, ವಿ.ಕೆ ಸುರೇಶ್ ಉಪಸ್ಥಿತರಿದ್ದರು.