ಮಡಿಕೇರಿ, ಅ. 14 : ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ ಸಂಘ ಹಾಗೂ ಕೊಡಗು ಜಿಲ್ಲಾ ಅಂಬಾಭವಾನಿ, ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ನ. 10ರಂದು ಕಚೇರಿ ಆವರಣದಲ್ಲಿ ಆಚರಿಸಲು ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಯಿತು. ಮಡಿಕೇರಿಯ ತಾಳತ್ತ್‍ಮನೆಯಲ್ಲಿರುವ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಸಂಘದ ಅಧ್ಯಕ್ಷ ಎಂ. ಎಂ. ಪರಮೇಶ್ವರ್ ಮಾತನಾಡಿ, ಅಂದು ಬೆಳಗ್ಗೆ 10 ಗಂಟೆಗೆ ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್.ನಾಯ್ಕ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಕಟ್ಟಡ ಸಮಿತಿ ಉಪಾಧ್ಯಕ್ಷ ಎಂ.ಎಸ್.ಮಂಜುನಾಥ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಂ.ಟಿ.ಪವನ್, ಅಂಬಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಎಸ್.ದಿವ್ಯಕುಮಾರ್, ಖಜಾಂಚಿ ಸಂಪತ್‍ಕುಮಾರ್, ಯುವಕ ಸಂಘದ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್.ಯೋಗೇಂದ್ರ, ಪ್ರಮುಖರಾದ ಎಂ. ಟಿ. ದೇವಪ್ಪ, ಎಂ. ಟಿ. ಗುರುವಪ್ಪ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ತುರ್ತು ಸಭೆ ನಡೆಸಲು ಸೂಚನೆ: ಶಾಲಾ ಮೈದಾನಗಳು ಕ್ರೀಡಾಕೂಟ ನಡೆಸಲು ಸಿಗದ ಹಿನ್ನೆಲೆ, 2020ರ ಕ್ರೀಡಾಕೂಟಕ್ಕೆ ಈಗಲೇ ಮೈದಾನ ಗುರುತಿಸುವಂತೆ ಯುವಕ ಸಂಘದ ಪದಾಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು. ಪ್ರಸಕ್ತ ವರ್ಷದಲ್ಲಿ ಎರಡೆರಡು ಬಾರಿ ದಿನಾಂಕ ಬದಲಿಸಲಾಗಿದೆ. ವಿದ್ಯಾರ್ಥಿಗಳ ಪರೀಕ್ಷಾ ದಿನಾಂಕವನ್ನು ಅರಿತು ಮೈದಾನ ಖಾದಿರಿಸಿ ಎಂದ ಅವರು ಈ ಸಂಬಂಧ ಯುವಕ ಸಂಘದ ಪದಾಧಿಕಾರಿಗಳು ತುರ್ತು ಸಭೆ ನಡೆಸಿ ಮಾಹಿತಿ ನೀಡಬೇಕು ಎಂದರು.

ಕ್ರೀಡಾಕೂಟದೊಂದಿಗೆ ಪ್ರತಿಯೊಬ್ಬ ಸದಸ್ಯರು ಸಂಘದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕಿದೆ. ಸಂಘದ ಪ್ರತಿ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಮಾಜಿಕ ಕಾರ್ಯಕ್ಕೆ ಪದಾಧಿಕಾರಿಗಳು ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ಸಂಘದ ಸಭಾಂಗಣ ಕಾಮಗಾರಿ ಆರಂಭಿಸಲಿದ್ದು, ಸರ್ವ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಂತ್ರಸ್ತರಿಗೆ ಪರಿಹಾರ: 2018-19 ಮತ್ತು 2019-20ನೇ ಸಾಲಿನಲ್ಲಿ ಪ್ರಕೃತಿ ವಿಕೋಪಕ್ಕೆ ಮನೆಕಳೆದುಕೊಂಡ ಮರಾಠ, ಮರಾಟಿ ಜನಾಂಗ ಬಾಂಧವರಿಗೆ ಸಂಘದ ವತಿಯಿಂದ ನ. 10 ರಂದು ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧನಸಹಾಯ ನೀಡಲಾಗುವದು. ಈ ಸಂಬಂಧ ಸುಮಾರು 50 ಮನೆಗಳ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಲಾಗುವದು. ಅಂದು ಸಂಘದಲ್ಲಿ ಸೂಚಿಸಲಾದ ಸಂತ್ರಸ್ತರು ಕಾರ್ಯಕ್ರಮಕ್ಕೆ ಆಗಮಿಸಿ ಪರಿಹಾರ ಹಣವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ. ಆರ್. ನಾಯ್ಕ್, ಕಾರ್ಯದರ್ಶಿ ಎಂ. ಟಿ. ಪವನ್, ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಖಜಾಂಚಿ ಸಂಪತ್‍ಕುಮಾರ್, ಯುವಕ ಸಂಘದ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಕಟ್ಟಡ ಸಮಿತಿ ಅಧ್ಯಕ್ಷ ಎಂ. ಟಿ. ಗುರುವಪ್ಪ, ಉಪಾಧ್ಯಕ್ಷ ಎಂ. ಎಸ್. ಮಂಜುನಾಥ್, ಕಾರ್ಯದರ್ಶಿ ಎಂ. ಎಸ್. ಯೋಗೇಂದ್ರ, ಪ್ರಮುಖರಾದ ಎಂ. ಟಿ. ದೇವಪ್ಪ, ಸತೀಶ್, ಮೋಹನ್ ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.