ಚೆಟ್ಟಳ್ಳಿ, ಅ. 14 : ಹಿಂದೂ ಮಲೆಯಾಳಿ ಸಮುದಾಯದವರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವದರೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ಕೊಡಗು ಜಿಲ್ಲಾ ಮಲೆಯಾಳಿ ಸಮಾಜದ ಅಧ್ಯಕ್ಷ ಕೆ.ಎಸ್ ರಮೇಶ್ ಹೇಳಿದರು. ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಚೆಟ್ಟಳ್ಳಿ ಹಿಂದೂ ಮಲೆಯಾಳಿ ಸಮಾಜದ ಹತ್ತನೇ ವರ್ಷದ ಓಣಂ ಆಚರಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಇಂದಿನ ಮಲೆಯಾಳಿ ಸಮಾಜದ ಯುವಜನತೆಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿಸಿಕೊಡುವ ಕೆಲಸ ಆಗಬೇಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಮಯವನ್ನು ಕಳೆಯುವ ಯುವಪೀಳಿಗೆಗೆ ಮಲೆಯಾಳಿ ಸಂಸ್ಕೃತಿಯ ಮನದಟ್ಟು ಮಾಡುವ ಕೆಲಸವನ್ನು ಮಾಡಿದರೆ ಮಾತ್ರ ಮಲೆಯಾಳಿ ಸಂಸ್ಕೃತಿ ಉಳಿಯುವದು ಎಂದರು.

ಕೊಡಗಿನ ಮೂಲೆ ಮೂಲೆಯಲ್ಲಿರುವ ಮಲೆಯಾಳಿಗಳು ಸಂಘಟಿತರಾಗಿ, ಒಗ್ಗಟ್ಟು ಪ್ರದರ್ಶಿಸಬೇಕು, ಅಲ್ಲದೇ ಸಾಮಾಜಿಕ , ರಾಜಕೀಯ, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು. 12 ವರ್ಷಗಳ ಹಿಂದೆ ಮೂರ್ನಾಡಿನಲ್ಲಿ ಆರಂಭಗೊಂಡ ಮಲೆಯಾಳಿ ಸಮಾಜವು, ಇಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಮಾಜಗಳನ್ನು ನಿರ್ಮಿಸಿರುವದು ಸಂತೋಷ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಮಲೆಯಾಳಿ ಸಮುದಾಯದ ಹತ್ತನೇ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಮಡಿಕೇರಿಯಲ್ಲಿ ಏರ್ಪಡಿಸಲಾಗುವದು.

ಮುಂದಿನ ತಿಂಗಳು ನವೆಂಬರ್‍ನಲ್ಲಿ ಮಡಿಕೇರಿಯಲ್ಲಿ ಜಿಲ್ಲಾ ಮಲೆಯಾಳಿ ಸಮಾಜದ ಓಣಂ ಆಚರಣೆ ಕಾರ್ಯಕ್ರಮ ನಡೆಯಲಿದ್ದು ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕೇಳಿಕೊಂಡರು. ಅಲ್ಲದೇ ಮುಂದಿನ ವರ್ಷ ವಿಷು ಅಂಗವಾಗಿ ಮಡಿಕೇರಿಯಲ್ಲಿ ಮಲೆಯಾಳಿ ಸಮುದಾಯದ ಸಮಾವೇಶ ನಡೆಯಲಿದೆ ಎಂದು ಇದೇ ಸಂದರ್ಭ ಕೆ. ಎಸ್. ರಮೇಶ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೆಟ್ಟಳ್ಳಿ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಕೆ ಶಶಿಕುಮಾರ್, ಪ್ರತಿ ವರ್ಷ ಚೆಟ್ಟಳ್ಳಿ ಮಲೆಯಾಳಿ ಸಮಾಜದಿಂದ ಓಣಂ ಆಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು, ಕಳೆದ ವರ್ಷ ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪದ ಕಾರಣದಿಂದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಈ ವರ್ಷ ಓಣಂ ಆಚರಣೆ ಕಾರ್ಯಕ್ರಮವು ಸರಳ ರೀತಿಯಲ್ಲಿ ನಡೆಸಿದ್ದೇವೆ ಎಂದರು. ಕಳೆದ ಹತ್ತು ವರ್ಷಗಳಲ್ಲಿ ಚೆಟ್ಟಳ್ಳಿ ಮಲೆಯಾಳಿ ಸಮಾಜದ ಕಾರ್ಯಕ್ರಮಗಳ ಬಗ್ಗೆ ಶಶಿಕುಮಾರ್ ವಿವರಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಶಭರೀಶಾ ಚಂಡೆಮೇಳವು ನೆರೆದಿದ್ದವರ ಗಮನ ಸೆಳೆಯಿತು.

ಮಹಿಳೆಯರು ಹಾಗೂ ಮಕ್ಕಳು ಮಲೆಯಾಳಿ ಸಮಾಜದ ಸಾಂಪ್ರದಾಯಿಕ ಉಡುಪು ತೊಟ್ಟು ಗಮನ ಸೆಳೆದರು. ಕೇರಳದ ಸಾಂಪ್ರದಾಯಿಕ ಆಹಾರ ಓಣಂ ಸದ್ಯವನ್ನು ಏರ್ಪಡಿಸಲಾಗಿತ್ತು. ಹಿಂದೂ ಮಲೆಯಾಳಿ ಸಮಾಜದ ಎಸ್.ಎಸ್.ಎಲ್.ಸಿ.ಹಾಗೂ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧ ಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ -ಕಲಾ ಕಾರ್ಯಕ್ರಮಗಳು ನಡೆದವು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವತ್ಸಲ, ಮಲೆಯಾಳಿ ಚೆಟ್ಟಳ್ಳಿ ಸಮಾಜದ ಉಪಾಧ್ಯಕ್ಷ ಚಂದ್ರನ್, ಸರೋಜಿನಿ, ಸುಂಟಿಕೊಪ್ಪ ಮಲೆಯಾಳಿ ಸಮಾಜದ ಅಧ್ಯಕ್ಷ ಸಂತೋಷ್ ಕುಮಾರ್, ನಂಜರಾಯಪಟ್ಟಣ ಮಲೆಯಾಳಿ ಸಮಾಜದ ಅಧ್ಯಕ್ಷ ಪ್ರೇಮಾನಂದ, ಮೂರ್ನಾಡು ಮಲೆಯಾಳಿ ಸಮಾಜದ ಅಧ್ಯಕ್ಷ ಹಾಗೂ ಜಿಲ್ಲಾ ಮಲೆಯಾಳಿ ಸಮಾಜದ ಖಜಾಂಜಿ ಬಾಬು ಇದ್ದರು.