ವೀರಾಜಪೇಟೆ, ಅ. 12: ಒಂದೂವರೆ ತಿಂಗಳ ಪ್ರಾಯದ ಹಸುಗೂಸನ್ನು ತಾಯಿಯ ಎದುರಿನಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇರೆ ಮಗುವಿನ ತಂದೆ ಪಂಜರಿ ಎರವರ ರವಿ(29) ಎಂಬಾತನಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ 4 ವರ್ಷ ಸಜೆ ರೂ. 16,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತಾ. 2-12-2018 ರಂದು ರಾತ್ರಿ 9ಗಂಟೆಯ ಸಮಯದಲ್ಲಿ ಕುಟ್ಟ ಸಮೀಪದ ಕೆ.ಬಾಡಗ ಬಳಿಯ ಚೂರಿ ಕಾಡಿನ ಸಿ.ರಮೇಶ್ ಎಂಬವರ ಲೈನು ಮನೆಯಲ್ಲಿದ್ದ ಪಂಜರಿ ಎರವರ ರವಿ ತನ್ನ ಪತ್ನಿ ಪಣಿ ಎರವರ ಭಾಗು (23) ಎಂಬಾಕೆ ತನ್ನ ಒಂದೂವರೆ ತಿಂಗಳ ಮಗು ಪ್ರಶಾಂತ್ನೊಂದಿಗೆ ತನ್ನ ಚಿಕ್ಕಮ್ಮನ ಮನೆಗೆ ತೆರಳುತ್ತಿದ್ದಾಗ ಆಕೆಯನ್ನು ತಡೆದು ನಿಲ್ಲಿಸಿದ ರವಿ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯ ಕುತ್ತಿಗೆಯನ್ನು ಹಿಸುಕಿದಲ್ಲದೆ ಆಕೆ ಕೈಯ್ಯಲ್ಲಿ ಎತ್ತಿಕೊಂಡಿದ್ದ ಹಸುಗೂಸು ಪ್ರಶಾಂತ್ನ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದನೆಂಬ ಆರೋಪದ ಮೇರೆ ಕುಟ್ಟ ಪೊಲೀಸರು ಭಾ.ದ.ಸಂ ಕಲಂ 307 ಹಾಗೂ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಆಗಿನ ಸರ್ಕಲ್ ಇನ್ಸ್ಪೆಕ್ಟರ್ ಸಿ.ಎನ್.ದಿವಾಕರ್ ಅವರು ಪ್ರಕರಣದ ತನಿಖೆ ನಡೆಸಿ ಸೆಷನ್ಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವೀರಾಜಪೇಟೆಯ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಕಲಂ 304 (2) ಮತ್ತು 323 ಭಾ.ದಂ.ಸಂ. ಅಡಿಯಲ್ಲಿ ದೂಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದು 304(2) ಮೂರು ವರ್ಷಗಳ ಸಜೆ ರೂ 15000 ದಂಡ, ದಂಡ ಕಟ್ಟಲು ತಪ್ಪಿದಲ್ಲಿ 3ತಿಂಗಳ ಸಜೆ. ಕಲಂ 323 ರ ಅಡಿಯಲ್ಲಿ 1ವರ್ಷ ಸಜೆ ರೂ 1000 ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಎರಡು ತಿಂಗಳ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.
ದಂಡದ ಹಣದಲ್ಲಿ ಗಾಯಾಳು ಭಾಗುವಿಗೆ ರೂ. 15000 ವನ್ನು ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ. ಸರಕಾರದ ಪರ ಅಭಿಯೋಜಕರಾದ ಡಿ.ನಾರಾಯಣ ವಾದಿಸಿದರು.