ಸೋಮವಾರಪೇಟೆ, ಅ. 13: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಕಮೆಂಟ್ಸ್ ಹಾಕಲಾಗಿದ್ದು, ಇಂತಹವರ ವಿರುದ್ದ ಕ್ರಮ ಕೈಗೊಳ್ಳುವಂತೆ ಶಾಸಕರ ಆಪ್ತ ಸಹಾಯಕ ರವಿ ಅವರು ಪೊಲೀಸ್ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದಾರೆ.ಕಳೆದ ತಾ. 10 ರಂದು ಕುಂಬೂರಿನಲ್ಲಿರುವ ಶಾಸಕರ ಮನೆಯ ಪರಿಸರದಲ್ಲಿ ಬೆಳೆಯಲಾಗಿದ್ದ ಶ್ರೀಗಂಧದ ಮರಗಳನ್ನು ಕಳ್ಳರು ಕದ್ದೊಯ್ದಿದ್ದರು. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.ಶಾಸಕರ ಮನೆಯಿಂದ ಶ್ರೀಗಂಧದ ಮರಗಳು ಕಳವಾದ ವಿಷಯಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್‍ನಲ್ಲಿ ತಮ್ಮಯ್ಯ ನಂಜಪ್ಪ, ಸಿಂಧ್ಯ ಅಯ್ಯಪ್ಪ, ಸನ್ನಿ ಪೂವಯ್ಯ, ಮೋಹಿದ್ ಕೂರ್ಗ್ ಮತ್ತು ದಿನೇಶ್ ಪಿ.ಎಸ್. ಲಿಶಾ ಎಂಬವರುಗಳು, ಶಾಸಕರನ್ನೇ ಗುರಿಯಾಗಿಸಿಕೊಂಡು ಅವಹೇಳನಕಾರಿ ಕಮೆಂಟ್‍ಗಳನ್ನು ಮಾಡುತ್ತಿದ್ದು, ಇವರುಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

ಇವರುಗಳ ಕಮೆಂಟ್ಸ್‍ನ ಸ್ಕ್ರೀನ್ ಶಾಟ್ ಸಹಿತ ಮಡಿಕೇರಿ ಪೊಲೀಸ್ ವೃತ್ತ ನಿರೀಕ್ಷಕರಿಗೆ ದೂರು ನೀಡಲಾಗಿದೆ.