ಸೋಮವಾರಪೇಟೆ, ಅ. 12: ಮಕ್ಕಳ ಹಕ್ಕುಗಳ ಉಲ್ಲಂಘನೆಯಂತಹ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡುವ ಮೂಲಕ ಅವರ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕೆಂದು ಚೈಲ್ಡ್ ಲೈನ್ ಸಂಸ್ಥೆಯ ಪ್ರವೀಣ್ ಸಲಹೆ ನೀಡಿದರು.

ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಸಮೀಪದ ನೇರುಗಳಲೆ ಶಾಲೆಯಲ್ಲಿ ಆಯೋಜಿಸ ಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ಹಕ್ಕುಗಳ ಉಲ್ಲಂಘನೆ, ಶೋಷಣೆ ಕಂಡುಬಂದರೆ ಯಾರು ಬೇಕಾದರೂ ಸಹಾಯವಾಣಿಗೆ ಕರೆ ಮಾಡಬಹುದು. ಕರೆ ಮಾಡಿದವರ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗುವದು ಎಂದರು.

ಭಾರತದೆಲ್ಲೆಡೆ ಮಕ್ಕಳ ರಕ್ಷಣೆಗಾಗಿ 1098 ಸಹಾಯವಾಣಿ ಸಂಖ್ಯೆಯಿದ್ದು, ಯಾವದೇ ಭಾಷೆಯಲ್ಲಿ ಬೇಕಾದರೂ ಮಾಹಿತಿ ನೀಡಬಹುದಾಗಿದೆ. ಒಂದು ಕರೆಯಿಂದ ಮಗುವಿನ ಜೀವನ ಸುಧಾರಣೆಯಾಗುತ್ತದೆ. ಈ ಸಹಾಯವಾಣಿ ಕೇಂದ್ರವು ದಿನದ 24 ಗಂಟೆಯೂ ಸೇವೆಯಲ್ಲಿರುತ್ತದೆ ಎಂದು ಮಾಹಿತಿ ಒದಗಿಸಿದರು.

ಕಾರ್ಯಕ್ರಮದಲ್ಲಿ ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ಮುಖ್ಯಶಿಕ್ಷಕಿ ಲೀಲಾವತಿ, ಸಿಆರ್‍ಪಿ ಚಿಣ್ಣಪ್ಪ, ಚೈಲ್ಡ್‍ಲೈನ್ ಸಂಸ್ಥೆಯ ಕುಸುಮ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಗಳು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.