ಸೋಮವಾರಪೇಟೆ, ಅ.12: ಕ್ಷುಲ್ಲಕ ವಿಚಾರಕ್ಕೆ ನೇಣು ಬಿಗಿದುಕೊಂಡು ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣ ಸಮೀಪದ ಆಲೇಕಟ್ಟೆಯಲ್ಲಿ ನಡೆದಿದೆ.

ಮೂಲತಃ ಸಿಂಗನಳ್ಳಿ ನಿವಾಸಿ, ಆಲೇಕಟ್ಟೆಯಲ್ಲಿ ನೆಲೆಸಿರುವ ಸುಬ್ರಮಣಿ ಮತ್ತು ಪ್ರೇಮಾ ದಂಪತಿಯ ಪುತ್ರ, ಕುಶಾಲನಗರದ ಎಂಜಿಎಂ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿ ಸುಮಂತ್ (22) ಎಂಬಾತನೇ ಆತ್ಮಹತ್ಯೆಗೆ ಶರಣಾದವನಾಗಿದ್ದು, ನಿನ್ನೆ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದೆ. ಮನೆಯಲ್ಲಿ ತಾಯಿ ಮತ್ತು ಸಹೋದರಿ ಇದ್ದು, ಟಿ.ವಿ. ನೋಡುತ್ತಿದ್ದ ಸಂದರ್ಭ ಕೊಠಡಿಯ ಒಳ ತೆರಳಿದ ಸುಮಂತ್, ವೇಲಿನಿಂದ ನೇಣು ಬಿಗಿದುಕೊಂಡಿದ್ದಾನೆ. ಈ ಸಂದರ್ಭ ತಾಯಿ ಮತ್ತು ಸಹೋದರಿ ರಕ್ಷಣೆಗೆ ಆಗಮಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಅಷ್ಟರಲ್ಲಾಗಲೇ ಕುತ್ತಿಗೆ ಭಾಗದಲ್ಲಿ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸುಮಂತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ತಂದೆ ಸುಬ್ರಮಣಿ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಾ. 13 ರಂದು (ಇಂದು) ಸ್ವಗ್ರಾಮಕ್ಕೆ ಆಗಮಿಸಿದ ನಂತರ ಮೃತದೇಹದ ಅಂತ್ಯಸಂಸ್ಕಾರ ನಡೆಯಲಿದೆ.