ಗೋಣಿಕೊಪ್ಪಲು. ಅ. 12: ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾಯಿಸಿ 3 ದಿನಗಳ ಕಾಲ ನಡೆಯುವ ರೈತರ ಬೃಹತ್ ವಾಹನ ಜಾಥಾಕ್ಕೆ ತಲಕಾವೇರಿಯಲ್ಲಿ ಚಾಲನೆ ನೀಡಲಾಯಿತು. ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ರೈತರ ಜಾಥಾಕ್ಕೆ ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ನಡೆದ ರೈತ ಜಾಥಾ ಕಾರ್ಯಕ್ರಮಕ್ಕೆ ವೀರಚಕ್ರ ಪ್ರಶಸ್ತಿ ಪಡೆದ ಮೇಜರ್ ಜನರಲ್ ಕುಪ್ಪಂಡ ನಂಜಪ್ಪ, ಅಂತರಾಷ್ಟ್ರೀಯ ರ್ಯಾಲಿ ಪಟು ಜಗತ್‍ನಂಜಪ್ಪ, ಇತರ ಗಣ್ಯರು ಹಸಿರು ನಿಶಾನೆ ತೋರಿದರು.ತಲಕಾವೇರಿಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕೊಡಗು ಜಿಲ್ಲೆಯಲ್ಲಿ ಸತತವಾಗಿ ಎರಡು ವರ್ಷಗಳಲ್ಲಿ ಭಯಾನಕ ಜಲಪ್ರಳಯ ಹಾಗೂ ಭೂ ಕುಸಿತವನ್ನು ಕಂಡಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಇಲ್ಲಿನ ಜನರು ಸುಧಾರಿಸಿಕೊಳ್ಳಲು ಸಾಕಷ್ಟು ವರ್ಷಗಳೇ ಬೇಕಾಗಿರುವದ ರಿಂದ ಕೊಡಗನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಬೇಕೆಂದು, ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಹಾಗೂ ರಾಜ್ಯ ಸರ್ಕಾರದ ಎಸ್‍ಡಿಆರ್ ಎಫ್ ಎನ್ನುವ ಪರಿಹಾರ ವನ್ನು ನೀಡುವ ಮಾರ್ಗದರ್ಶಿ ನೀತಿಯನ್ನು ಬದಲಿಸಿ ಜಿಲ್ಲೆಯ ಜಲಪ್ರಳಯ, ಬೆಳೆಹಾನಿ ಭೂಕುಸಿತ ದಿಂದ ನೊಂದ

(ಮೊದಲ ಪುಟದಿಂದ) ರೈತರಿಗೆ ವೈಜ್ಞಾನಿಕವಾಗಿ ಸಂಪೂರ್ಣ ನಷ್ಟ ಪರಿಹಾರವನ್ನು 10 ಪಟ್ಟು ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಮೇಜರ್ ಜನರಲ್ ಕುಪ್ಪಂಡ ನಂಜಪ್ಪ, ಮಾತನಾಡಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ತೋರಿರುವ ಕಾಳಜಿ ಮೆಚ್ಚತಕ್ಕದ್ದು ಜಿಲ್ಲೆಯ ರೈತರು ರೈತ ಸಂಘದೊಂದಿಗೆ ಕೈ ಜೋಡಿಸಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಮತ್ತೋರ್ವ ಅತಿಥಿ ಅಂತರಾಷ್ಟ್ರೀಯ ರ್ಯಾಲಿ ಪಟು ಜಗತ್‍ನಂಜಪ್ಪ, ರೈತ ಸಂಘವು ರಾಜ್ಯ ಮಟ್ಟದಲ್ಲಿ ವಿಸ್ತರಿಸಿಕೊಂಡಿರುವ ದರಿಂದ ಸರ್ಕಾರದ ಗಮನ ಸೆಳೆಯಲು ಅನುಕೂಲವಾಗಲಿದೆ. ರೈತರು ಹೋರಾಟದಲ್ಲಿ ಧುಮುಕಬೇಕೆಂದರು.

ರಾಜ್ಯ ಮುಖಂಡರು, ಜಿಲ್ಲಾ ಮುಖಂಡರು ವಿವಿಧ ಹೋಬಳಿ ಸಮಿತಿಯ ಸಂಚಾಲಕರುಗಳು, ಪದಾಧಿಕಾರಿಗಳು ರೈತ ಮುಖಂಡರುಗಳು ಹಾಜರಿದ್ದರು. ಮುಂಜಾನೆ ತಲಕಾವೇರಿಯಿಂದ ಹೊರಟ ರೈತರ ವಾಹನ ಜಾಥಾವು ಭಾಗಮಂಡಲ ಮೂಲಕ ಹಾದು ಬಂದು ಜಿಲ್ಲಾ ಕೇಂದ್ರ ಮಡಿಕೇರಿಯ ಜ.ತಿಮ್ಮಯ್ಯ ವೃತ್ತದಲ್ಲಿ ಸಮಾಗಮಗೊಂಡಿತ್ತು. ರೈತ ಮುಖಂಡರು ಜ.ತಿಮ್ಮಯ್ಯ ವೃತ್ತದಲಿ ಮಾನವ ಸರಪಳಿ ನಿರ್ಮಿಸಿ, ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೂಡಲೇ ಸರ್ಕಾರ ಗಮನ ಸೆಳೆಯುವ ಮೂಲಕ ಅನ್ನದಾತರ ಸಂಕಷ್ಟಕ್ಕೆ ನಿಲ್ಲಬೇಕು ಎಂದು ಹೇಳಿದರು.

ಸಿ.ಎನ್.ಸಿ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಬಹಿರಂಗ ಸಭೆಯನ್ನು ಉದ್ದೇಶಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಯುಕೋ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜು ಚಿಣ್ಣಪ್ಪ ಮಾತನಾಡಿ ರೈತ ಸಂಘವು ರೈತರ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಿರುವದು ಒಳ್ಳೆಯ ಬೆಳವಣಿಗೆ ಜಿಲ್ಲೆಯ ರೈತರು ಹೋರಾಟಕ್ಕೆ ಕೈ ಜೋಡಿಸಬೇಕೆಂದರು. ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ ಜಿಲ್ಲೆಯ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ರೈತರ ನಿರಂತರ ಹೋರಾಟದಿಂದ ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಮುಖಂಡ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಜಿಲ್ಲೆಯ ರೈತರ ವಿವಿಧ 16 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವದು; ಪ್ರಧಾನಮಂತ್ರಿಗೆ ರೈತರು ಒತ್ತಡ ಹೇರುವ ಸಲುವಾಗಿಯೇ ಬೃಹತ್ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಪೊಲೀಸರು ಸಕಾಲದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ನಂತರ ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ ಪಟ್ಟಣದಲ್ಲಿ ರೈತರನ್ನು ಉದ್ದೇಶಿಸಿ ಜಿಲ್ಲಾ ರೈತ ಮುಖಂಡರಾದ ಸುಜಯ್ ಬೋಪಯ್ಯ, ಅಪ್ಪಚಂಗಡ ಮೋಟಯ್ಯ, ಸೋಮೆಯಂಗಡ ಗಣೇಶ್ ಮುಂತಾದವರು ಮಾತನಾಡಿದರು. ನೂರಾರು ವಾಹನ ಗಳು ಜಾಥಾದಲ್ಲಿ ಪಾಲ್ಗೊಂಡಿದ್ದವು. ತಿತಿಮತಿ ಮಾರ್ಗವಾಗಿ ಕೊಡಗಿನ ಗಡಿ ಆನೆಚೌಕೂರು ದಾಟಿ ಹುಣಸೂರಿನತ್ತ ವಾಹನ ಜಾಥಾವು ಪ್ರಯಾಣ ಬೆಳೆಸಿತು. ಜಿಲ್ಲೆಯ ಪ್ರವಾಹ ಪೀಡಿತ, ಅಕಾಲಿಕ ಮಳೆ,ಬರ ನಿರ್ವಹಣೆ ಕಾಫಿ ಮತ್ತು ಕರಿಮೆಣಸು ಬೆಲೆ ಕುಸಿತದ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸುವ ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ¨s Áಗದಿಂದ ರೈತರು ಭಾಗವಹಿಸಿದ್ದರು.

ರಾಜ್ಯ ಸಮಿತಿ ಪದಾಧಿಕಾರಿ ಗಳಾದ ರವಿ ಕಿರಣ್ ಪೂಣಚ, ಮುತ್ತಪ್ಪ ಕೋಮಾರಿ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಜಿ ಇಟ್ಟೀರ ಸಭೀತ, ಪೊನ್ನಂಪೇಟೆ ಹೋಬಳಿ ಸಂಚಾಲಕ ಅಲೆಮಾಡ ಮಂಜುನಾಥ್ ಟಿ.ಶೆಟ್ಟಿಗೇರಿಯ ಸಂಚಾಲಕ ಅಪ್ಪಚಂಗಡ ಮೋಟಯ್ಯ, ಶ್ರೀಮಂಗಲ ಹೋಬಳಿ ಸಂಚಾಲಕ, ಬಾಚಮಾಡ ಭವಿ ಕುಮಾರ್, ಟಿ.ಶೆಟ್ಟಿಗೇರಿ ಸಂಚಾಲಕ ಕಂಭ ಕಾರ್ಯಪ್ಪ, ಹುದಿಕೇರಿ ಸಂಚಾಲಕ ಸೂರಜ್, ರೈತ ಮುಖಂಡರುಗಳಾದ ಮಲ್ಚೀರ ಅಶೋಕ್, ತೀತರಮಾಡ ರಾಜ, ಸುನೀಲ್, ಪುಚ್ಚಿಮಾಡ ಅಶೋಕ್, ಸುನೀಲ್, ಆಳಮೇಂಗಡ ಮೋಟಯ್ಯ, ಬೊಳ್ಳೆರ ರಾಜ ಸುಬ್ಬಯ್ಯ, ಗುಡಿಯಂಗಡ ರಾಜ,ಕಳ್ಳಿಚಂಡ ರತ್ನ ಪೂವಯ್ಯ, ದೇವಣೀರ ವಜ್ರು, ಬೋಪಣ್ಣ, ಸಿದ್ದಾಪುರ ಹೋಬಳಿ ಸಂಚಾಲಕ ಬುಟ್ಟಿಯಂಡ ಹರಿ ಸೋಮಯ್ಯ, ಮಂಡೇಪಂಡ ಅರ್ಜುನ್, ಪೀಟರ್ ಜಾನ್, ಅಪ್ಪಾರಂಡ ಅಪ್ಪಣ್ಣ, ಕುಕ್ಕನೂರು ಸುನಿಲ್, ಲೀಖಿತ್, ಸೂರಜ್, ಮೋಹನ್, ಜೋಸೆಪ್ ಕಿರಣ್, ಚಿಪೇಕೊಲ್ಲಿಯ ಮೇದಪ್ಪ, ನೆಲ್ಲಿಹುದಿಕೇರಿಯ ಚಂದ್ರಕುಮಾರ್, ಮೇದಪ್ಪ, ಡಿ.ಕೆ.ವಿಶ್ವನಾಥ್, ಜಯಕುಮಾರ್, ಸುದೀರ್, ಕೊಟ್ಟಗೇರಿ ಅಳಮೇಗಂಡ ಸುರೇಶ್ ಸುಬ್ಬಯ್ಯ, ಅರಮಣಮಾಡ ರೋಷನ್, ಬಾಚಮಾಡ ವಿಶು, ನಿಟ್ಟೂರುವಿನ ಕಿಶಮಾಚಯ್ಯ, ತಾಣಚ್ಚಿರ ಲೆಹರ್ ಬಿದ್ದಪ್ಪ ಮುಂತಾದವರು ಭಾಗವಹಿಸಿದ್ದರು. ಭಾಗಮಂಡಲ ಠಾಣಾಧಿಕಾರಿ ಹೆಚ್.ಕೆ. ಮಹದೇವ್, ವೃತ್ತನಿರೀಕ್ಷಕ ಅನೂಪ್ ಮಾದಪ್ಪ, ವೀರಾಜಪೇಟೆ ಡಿವೈಎಸ್‍ಪಿ ಜಯಕುಮಾರ್, ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.

ಚಿತ್ರ ವರದಿ, ಹೆಚ್.ಕೆ.ಜಗದೀಶ್