ಕುಶಾಲನಗರ, ಅ. 12: ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಹಿಂದಿನಿಂದ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ತೀವ್ರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಮಾರುಕಟ್ಟೆ ರಸ್ತೆಯಲ್ಲಿ ಹೊಟೇಲ್ ನಡೆಸುತ್ತಿದ್ದ ಪ್ರಭಾಕರ ಭಟ್ (50) ಎಂಬವರು ತೀವ್ರ ಗಾಯಗೊಂಡ ವ್ಯಕ್ತಿ. ಪ್ರಭಾಕರ್ ಭಟ್ ತನ್ನ ಪತ್ನಿಯೊಂದಿಗೆ ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ ಸಂದರ್ಭ ಘಟನೆ ಸಂಭವಿಸಿದೆ. ಕೊಪ್ಪ ಕಡೆಯಿಂದ ಮಾರುಕಟ್ಟೆ ರಸ್ತೆ ಮೂಲಕ ಕೂಡಿಗೆ ಕಡೆಗೆ ತೆರಳಿದ ಲಾರಿ ಡಿಕ್ಕಿ ಹೊಡೆದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಲಾರಿ ಸ್ಥಳದಿಂದ ಪರಾರಿಯಾಗಿದ್ದು ಗಾಯಾಳುವಿಗೆ ಸ್ಥಳೀಯರು ತಕ್ಷಣ ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿಗೆ ಸಾಗಿಸಲಾಗಿದೆ. ಅದೃಷ್ಟವಶಾತ್ ಪತ್ನಿಗೆ ಯಾವದೇ ರೀತಿಯ ಅಪಾಯ ಉಂಟಾಗಿಲ್ಲ.
ಅಪಘಾತ - ಆಸ್ಪತ್ರೆಗೆ ದಾಖಲು(ಮೊದಲ ಪುಟದಿಂದ) ಇತ್ತೀಚೆಗಷ್ಟೆ ಕೊಡಗನ ರಮೇಶ್ ಎಂಬವರು ವಾಯು ವಿಹಾರಕ್ಕೆ ತೆರಳಿದ ಸಂದರ್ಭ ಹಿಂದಿನಿಂದ ಬೈಕ್ ಒಂದು ಡಿಕ್ಕಿಯಾಗಿ ಚಿಂತಾಜನಕ ಸ್ಥಿತಿಯಲ್ಲಿ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರುಕಟ್ಟೆ ರಸ್ತೆಯಲ್ಲಿ ಅತಿ ವೇಗದಲ್ಲಿ ಮತ್ತು ಕುಡಿದು ವಾಹನ ಚಲಾವಣೆ ಹಾಗೂ ಮೊಬೈಲ್ ಬಳಸುವದರೊಂದಿಗೆ ಚಾಲನೆ ಮಾಡುತ್ತಿರುವದು ಈ ದುರಂತಗಳಿಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.