ಮಡಿಕೇರಿ, ಅ. 11: ಪ್ರತಿಯೊಬ್ಬರೂ ಯೋಗ, ಧ್ಯಾನ, ಪ್ರಾರ್ಥನೆ ಮಾಡುವದರಿಂದ ಮಾನಸಿಕವಾಗಿ ನೆಮ್ಮದಿಯಾಗಿರ ಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗ್ರೀನ್ ಡಾಟ್ ಟ್ರಸ್ಟ್, ಶಕ್ತಿಧಾಮ, ಮಾದಕ ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರ ಹಾಗೂ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿಯೊಬ್ಬರೂ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಕಡೆಯೂ ಗಮನಹರಿಸುವದು ಅಗತ್ಯ ಎಂದು ಅವರು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ರೂಪೇಶ್ ಗೋಪಾಲ್ ಮಾತನಾಡಿ, ಆತ್ಮಹತ್ಯೆಗೆ ಹಲವು ಕಾರಣಗಳಿದ್ದು, ಕೆಲಸದಲ್ಲಿ ಒತ್ತಡ, ಸಾಲ ಮಾಡಿಕೊಂಡಿರುವದು, ಕೌಟುಂಬಿಕ ಕಲಹ, ಖಿನ್ನತೆ, ದೈಹಿಕ ಸಮಸ್ಯೆ ಮತ್ತಿತರ ಕಾರಣವಾಗಿದೆ ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ವೈ. ಚಿತ್ರಾ ಮಾತನಾಡಿ, ಪುಸ್ತಕ ಓದುವದು, ಬರಹ, ಸಂಗೀತ, ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಾಗ ಮಾನಸಿಕ ಒತ್ತಡದಿಂದ ದೂರವಿರಬಹುದು ಎಂದು ಅಭಿಪ್ರಾಯಪಟ್ಟರು.
ಪ್ರಾಧ್ಯಾಪಕಿ ಕನ್ನಿಕಾ ಮಾತನಾಡಿ, ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಇರಬೇಕು ಎಂದರು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಎಂ. ಶಿವಕುಮಾರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಡೆವಿಲ್ ಲಿನೇಕರ್ ಕರ್ಕಡ, ಮಾನಸದಾರ ಸಂಸ್ಥೆಯ ವ್ಯವಸ್ಥಾಪಕರಾದ ವಿಶ್ವನಾಥ್, ಇತರರು ಇದ್ದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ನಿರೂಪಿಸಿದರು. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಸಂಯೋಜಕ ಡಿ.ಸಿ. ತೇಜಸ್ ಸ್ವಾಗತಿಸಿದರು.
ಜಾಥಾ: ಸಭಾ ಕಾರ್ಯಕ್ರಮದ ಮೊದಲು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಜಾಥಾಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಹಾಗೂ ಜಿ.ಪಂ. ಸಿಇಓ ಕೆ. ಲಕ್ಷ್ಮೀಪ್ರಿಯಾ ಚಾಲನೆ ನೀಡಿದರು. ಈ ಸಂದರ್ಭ ಆರ್‍ಸಿಹೆಚ್. ಅಧಿಕಾರಿ ಡಾ. ಎಸ್. ಗೋಪಿನಾಥ್, ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಎನ್. ಆನಂದ್ ಇತರರು ಇದ್ದರು.