ಸೋಮವಾರಪೇಟೆ,ಅ.11: ವ್ಯಕ್ತಿಯೊಬ್ಬರನ್ನು ಕಡಿದು ಕೊಲೆ ಮಾಡಿ ಕಾಫಿ ತೋಟದಲ್ಲಿ ಹಾಕಿದ ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದಿನಾಂಕ 08.10.2019 ರಂದು ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಜಂಬೂರು ಗ್ರಾಮದ ಕಾಫಿ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಬಿಹಾರ ಮೂಲದ ಯುವಕ ದೀಪಕ್ ಕುಮಾರ್ ಎಂಬಾತನ ಮೃತದೇಹ ಪತ್ತೆಯಾಗಿದ್ದು, ಆತನ ಕುತ್ತಿಗೆ ಹಾಗೂ ತಲೆಯ ಭಾಗಕ್ಕೆ ಯಾವುದೋ ಹರಿತವಾದ ಆಯುಧದಿಂದ ಕಡಿದು ಕೊಲೆ ಮಾಡಿ ಅದನ್ನು ಮರೆಮಾಚುವ ಉದ್ದೇಶದಿಂದ ಮೃತದೇಹವನ್ನು ಕಾಫಿ ತೋಟದೊಳಗೆ ಹಾಕಲಾಗಿತ್ತು. ಈ ಪ್ರಕರಣದ ಆರೋಪಿಗಳಾದ ಕಿಶೋರ್ ಕುಮಾರ್, ತಂದೆ ಪೌತಿ ಸಿಕಂದರ್ ಷಾ ಪ್ರಾಯ: 27 ವರ್ಷ, ಟೈಲ್ಸ್ ಕೆಲಸ, ಬನಿಯಾ ಜನಾಂಗ, ವಾಸ: ವಿಜಯ್ ನಗರ ಗ್ರಾಮ, ಬರಿಹಾರ್ ಪುರ್ ಪಿ.ಎಸ್., ಜಮಾಲ್ಪುರ್ ತಾಲೂಕು ಮುಗೇರ್ ಜಿಲ್ಲೆ, ಬಿಹಾರ ರಾಜ್ಯ ಮತ್ತು ರಾಹುಲ್ ಕುಮಾರ್ ಮುಖೇಶ್ ಕುಮಾರ್, ತಂದೆ ಪೌತಿ ಸಕಿಚಂದ್ರ ಷಾ, ಪ್ರಾಯ:22 ವರ್ಷ, ಟೈಲ್ಸ್ ಕೆಲಸ, ಬನಿಯಾ ಜನಾಂಗ, ವಾಸ: ಮೊಜಾಹಿದ್ ಪುರ ಗ್ರಾಮ, ಪರ್ಬತ ಅಂಚೆ ಮತ್ತು ಠಾಣಾ, ಗೋಗ್ರೀ ತಾಲೂಕು, ಕಗಾರಿಯಾ ಜಿಲ್ಲೆ, ಬಿಹಾರ ರಾಜ್ಯ ಇವರುಗಳನ್ನು ಕ್ಷಿಪ್ರಗತಿಯಲ್ಲಿ ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ, ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡ ಮತ್ತು ಸಿಬ್ಬಂದಿಗಳು, ಸೋಮವಾರಪೇಟೆ ಪೊಲೀಸ್ ಠಾಣಾ ಪಿ.ಎಸ್.ಐ., ಶಿವಶಂಕರ್ ಮತ್ತು ಸಿಬ್ಬಂದಿಗಳು ಮತ್ತು ಮಡಿಕೇರಿ ಡಿ.ಸಿ.ಐ.ಬಿ., ವಿಭಾಗದ ಸಿಬ್ಬಂದಿಗಳು ಪತ್ತೆಹಚ್ಚಿದ್ದು ಇವರ ಕಾರ್ಯವೈಖರಿಯನ್ನು ಪೊಲೀಸ್ ವರಿಷ್ಠಾಧಿಕಾರಿಯವರು ಶ್ಲಾಘಿಸಿದ್ದಾರೆ.