ಕುಶಾಲನಗರ, ಅ. 9: ಸ್ಫೋಟಕ ವಸ್ತುಗಳನ್ನು ಬಳಸುವ ಮೂಲಕ ಉಂಟಾಗುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತನೆ ಹರಿಸಬೇಕಾಗಿದೆ ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಭಾರ ಪ್ರಾಂಶುಪಾಲ ಎಸ್.ಟಿ. ಜವರೇಗೌಡ ಹೇಳಿದರು.
ರಾಜ್ಯದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಪರಿಸರ ಕಾರ್ಯಕ್ರಮದಡಿ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಡಯಟ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ ಕೂಡಿಗೆ ಡಯಟ್ನಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಏರ್ಪಡಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಪಟಾಕಿ ತ್ಯಜಿಸುವ ಮೂಲಕ ಜೀವಿ ಸಂಕುಲ ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಬಗ್ಗೆ ಮುಂದಾಗಬೇಕಾಗಿದೆ ಎಂದರು. ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಮಹತ್ವ ಕುರಿತು ವಿವರಿಸಿದ ಪರಿಸರ ಜಾಗೃತಿ ಆಂದೋಲನ ಮತ್ತು ಇಕೋ ಕ್ಲಬ್ಗಳ ಜಿಲ್ಲಾ ಸಂಯೋಜಕರೂ ಆದ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಪಟಾಕಿ ಮುಕ್ತ ದೀಪಾವಳಿ ಆಚರಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಇಂತಹ ಆಂದೋಲನ ರೂಪಿಸಲಾಗಿದೆ. ಪಟಾಕಿ ಸಿಡಿಸುವದರಿಂದ ಹಣದ ದುಂದುವೆಚ್ಚದ ಜತೆಗೆ ಪರಿಸರ ಮತ್ತು ಆರೋಗ್ಯಕ್ಕೆ ಹಾನಿ, ವಾಯುಮಾಲಿನ್ಯ, ಶಬ್ದ ಮಾಲಿನ್ಯಗಳಾಗುತ್ತವೆ. ಹಾನಿಕಾರಕವಾದ ಅಂಧತ್ವದ ಅಪಾಯಗಳನ್ನು ಸೃಷ್ಟಿಸುವ ಪಟಾಕಿಯನ್ನು ತ್ಯಜಿಸಿ ಹಸಿರು ದೀಪಾವಳಿ ಆಚರಿಸಲು ಕಂಕಣ ಬದ್ಧರಾಗಬೇಕಿದೆ ಎಂದರು.
ಡಯಟ್ ಸಂಸ್ಥೆಯ ಉಪನ್ಯಾಸಕ ಸಿದ್ದೇಶಿ, ಹಸಿರು ದೀಪಾವಳಿ ಆಚರಣೆ ಕುರಿತು ಸಂಸ್ಥೆಯ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಾಗೃತಿ ಅಭಿಯಾನದಲ್ಲಿ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಮಲ್ಲೇಸ್ವಾಮಿ, ಮಹಾದೇವ್, ಕೆ.ವಿ. ಸುರೇಶ್, ಉಪನ್ಯಾಸಕರಾದ ಕುಮಾರ್, ನಳಿನಾಕ್ಷಿ, ಧನಂಜಯ, ಗಾಯಿತ್ರಿ, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸದಸ್ಯ ಎಸ್. ನಾಗರಾಜ್, ತರಬೇತಿ ಸಂಯೋಜಕ ಕೆ.ಶಾಂತಕುಮಾರ್, ಡಿ.ಎಡ್. ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಅಭಿಯಾನದಲ್ಲಿ ಪ್ರಶಿಕ್ಷಣಾರ್ಥಿಗಳು ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತಂತೆ ಪರಿಸರ ಘೋಷಣೆಗಳನ್ನು ಕೂಗಿದರು. ಹಣತೆ ಹಚ್ಚೋಣ-ಪಟಾಕಿ ತ್ಯಜಿಸೋಣ, ಪಟಾಕಿ ತ್ಯಜಿಸೋಣ-ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ ಎಂಬಿತ್ಯಾದಿ ಘೋಷಣೆಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಿದರು.