ಶನಿವಾರಸಂತೆ, ಅ. 9: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷರ ದಾಸೋಹದ ಹೇಮಂತ್ ಕುಮಾರ್ ವಹಿಸಿದ್ದರು.

ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧಕ ದಿನೇಶ್ ಮೂರು ದಿನಗಳು ಕಡತಗಳ ಕಾಮಗಾರಿಗಳ ಪರಿಶೋಧನೆ ನಡೆಸಿ, ವರದಿಯನ್ನು ಸಭೆಗೆ ಮಂಡಿಸಿದರು. 2018-19ನೇ ಸಾಲಿನಲ್ಲಿ ರೂ. 23 ಲಕ್ಷ ಮೌಲ್ಯದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಕಾಮಗಾರಿ ಮೊತ್ತ ವಿವರವನ್ನು ಗುಣಮಟ್ಟದ ಬಗ್ಗೆ ಹಾಗೂ ಉಪಯುಕ್ತತೆಯ ಬಗ್ಗೆ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಪಿ. ಬೋಜಪ್ಪ ಮಾತನಾಡಿ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೆಚ್ಚಿನ ಗ್ರಾಮಸ್ಥರು ಜಾಬ್ ಕಾರ್ಡ್‍ಗೆ ನೋಂದಾಯಿಸಿಕೊಂಡು ವೈಯಕ್ತಿಕ ಹಾಗೂ ಸಮುದಾಯಗಳ ಸೌಲಭ್ಯ ಪಡೆಯಬೇಕೆಂದು ಮಾಹಿತಿ ನೀಡಿದರು. ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಅವರು ಮಾತನಾಡಿ, 2018-19ನೇ ಸಾಲಿನ ಖರ್ಚು ವೆಚ್ಚದ ಮಾಹಿತಿಯನ್ನು ಸಭೆಗೆ ಮಂಡಿಸಿ ಅನುಮೋದನೆ ಪಡೆಯಲಾಯಿತು.

ಉದ್ಯೋಗ ಖಾತ್ರಿ ಯೋಜನೆ ಯಡಿ ಕಟ್ಟಲಾದ ಭಾರತ ನಿರ್ಮಾಣ ಸೇವಾ ಕೇಂದ್ರ ಕಟ್ಟಡ ಅತ್ಯುತ್ತಮವಾಗಿದ್ದು, ಮಾದರಿ ಕಟ್ಟಡವಾಗಿ ನಿರ್ಮಾಣಗೊಂಡಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಪಂಚಾಯಿತಿ ಸದಸ್ಯರುಗಳಾದ ಎನ್.ಕೆ. ಸುಮತಿ, ಮನು ಹರೀಶ್, ಬಿಂದಮ್ಮ, ಪಾರ್ವತಿ, ನೇತ್ರಾವತಿ, ಎ.ಆರ್. ರಕ್ಷಿತ, ಡಿ.ಎಲ್. ಯೋಗೇಂದ್ರ, ಆಶಾ ಕಾರ್ಯಕರ್ತೆ ಯರು, ಧರ್ಮಸ್ಥಳ ಸಂಘದವರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಸ್ವಾಗತಿಸಿ, ಕಾರ್ಯದರ್ಶಿ ವೇಣುಗೋಪಾಲ್ ವಂದಿಸಿದರು.