ಗೋಣಿಕೊಪ್ಪಲು, ಅ.9: ಶ್ರೀ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಗೆ ನಿರೀಕ್ಷೆಗೂ ಮೀರಿ ಜನಸಾಗರ ನಗರಕ್ಕೆ ಆಗಮಿಸಿದ್ದು ರಾತ್ರಿಯಿಂದ ಮುಂಜಾನೆವರೆಗೂ ಜನಸಂದಣಿ ಯಿಂದ ಕೂಡಿತ್ತು ಬೆಳಕಿನ ಲೋಕವೆ ಭೂಮಿಗೆ ಇಳಿದು ಬಂದಂತಿದ್ದ ಶೋಭಾಯಾತ್ರೆ ಗೋಣಿಕೊಪ್ಪಲುವಿನಲ್ಲಿ ವಿಜೃಂಭಿಸಿತು. ಕಣ್ಣು ಕೋರೈಸುವ ವಿದ್ಯುತ್ ಬೆಳಕಿನಲ್ಲಿ ಪೌರಾಣಿಕ ಕಥಾ ಸಾರಾಂಶ ಪ್ರಸ್ತುತ ಪಡಿಸುವ ದಶಮಂಟಪಗಳು ಜನತೆಯ ಗಮನ ಸೆಳೆದವು. 10 ದಶಮಂಟಪಗಳಲ್ಲಿ ಕಥೆ,ವಿದ್ಯುತ್ ಬೆಳಕು,ಡಿಜೆ. ಸಂಗೀತ, ಕೊಡವ ವಾಲಗ, ಬ್ಯಾಂಡ್‍ಸೆಟ್‍ನ ಸಂಗೀತಕ್ಕೆ ಸಾವಿರಾರು ಮಂದಿ ಹೆಜ್ಜೆ ಹಾಕಿ ಮುಂಜಾನೆವರೆಗೂ ಕುಣಿದು ಕುಪ್ಪಳಿಸಿದರು. ಬೈಪಾಸ್ ರಸ್ತೆಯ ಮೂಲಕ ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ, ಅರುವತೋಕ್ಲುವಿನ ಶಾರದಾಂಭ ದಸರಾ ಸಮಿತಿ, ಕಾಫಿ ಬೋರ್ಡ್‍ವಿನ ಕಾಡ್ಲಯ್ಯಪ್ಪ ದಸರಾ ಸಮಿತಿ,ಪಾಲಿಬೆಟ್ಟ ರಸ್ತೆಯ ಸ್ನೇಹಿತರ ಬಳಗ ದಸರಾ ಸಮಿತಿ ಪ್ರದರ್ಶನ ನೀಡುತ್ತ ಉಮಾಮಹೇಶ್ವರಿ ದೇವಸ್ಥಾನದತ್ತ ಆಗಮಿಸಿದರೆ ಪ್ರಾಥಮಿಕ ಶಾಲಾ ಮಾರ್ಗದಲ್ಲಿ ಕಾವೇರಿ ದಸರಾ ಸಮಿತಿ, ದಸರಾ ನಾಡ ಹಬ್ಬ, 2ನೇ ವಿಭಾಗದ ಸರ್ವರ ದಸರಾ ಸಮಿತಿ ಮಾರ್ಕೆಟ್‍ನ ನವಚೇತನ ದಸರಾ ಸಮಿತಿ,3ನೇ ವಿಭಾಗದ ಯುವ ದಸರಾ ಸಮಿತಿ ಮಂಟಪಗಳು ದೇವಸ್ಥಾನದ ಬಳಿ ಸಮಾಗಮಗೊಂಡವು. ಕೈಕೇರಿಯ ಭಗವತಿ ದಸರಾ ಸಮಿತಿ ಇವುಗಳೊಂದಿಗೆ ಸೇರಿಕೊಂಡು ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆ ನಡೆಸಿದವು.

ರಾತ್ರಿ 10 ಗಂಟೆಗೆ ಆರಂಭವಾದ ದಶಮಂಟಪಗಳ ಶೋಭಾಯಾತ್ರೆ ಯಲ್ಲಿ ಮಂಟಪಗಳು ತಮ್ಮ ಪ್ರದರ್ಶನಗಳನ್ನು ನೀಡುವ ಮೂಲಕ ನಾಡಿನ ಜನತೆಗೆ ದಸರಾದ ರಸದೌತಣ ನೀಡಿತು.

(ಮೊದಲ ಪುಟದಿಂದ) ಮಂಟಪಗಳು ಮುಂಜಾನೆ 5.45ರ ಸಮಯದಲ್ಲಿ ನಗರದ ಬಸ್ ನಿಲ್ದಾಣ ತಲುಪಿದವು ಜನಸಾಗರ ಪ್ರತಿ ಮಂಟಪದ ಹಿಂಭಾಗ, ಮುಂಭಾಗದಲ್ಲಿ ಡಿಜೆ ಸೌಂಡ್‍ಗಳಿಗೆ ಹೆಜ್ಜೆ ಹಾಕುತ್ತಿತ್ತು. ಶೊಭಾಯಾತ್ರೆಯ ಮುಂಚೂಣಿಯಲ್ಲಿ ಕಾವೇರಿ ದಸರಾ ಸಮಿತಿಯ ಮಂಟಪವು ಚಾಮುಂಡೇಶ್ವರಿಯನ್ನು ಹೊತ್ತು ಮುಂದೆ ಸಾಗಿತು. ಮುಂಜಾನೆ 6.30ರ ಸಮಯಕ್ಕೆ ಹರಿಶ್ಚಂದ್ರಪುರದ ಕೆರೆಯಲ್ಲಿ ಸಮಿತಿಯ ಸದಸ್ಯರು ಮೂರ್ತಿ ವಿಸರ್ಜನೆ ನಡೆಸಿದರು.

ಕೊಪ್ಪದ ಸ್ನೇಹಿತರ ಬಳಗ ಮೊದಲ ಬಹುಮಾನಕ್ಕೆ ಭಾಜನರಾದರೆ ದ್ವಿತೀಯ ಬಹುಮಾನವನ್ನು 2ನೇ ವಿಭಾಗದ ಯುವ ದಸರಾ ಸಮಿತಿಯ ಪಾಲಾಗಿತ್ತು. 3ನೇ ಬಹುಮಾನ ಕಾಫಿ ಬೋರ್ಡ್‍ವಿನ ಕಾಡ್ಲಯ್ಯಪ್ಪ ಪಡೆದುಕೊಂಡಿತ್ತು. ಮುಂಜಾನೆ 5.45ಕ್ಕೆ ಬಸ್ ನಿಲ್ದಾಣದಲ್ಲಿ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ, ಕಾರ್ಯಧ್ಯಕ್ಷ ಕೆ.ಪಿ.ಬೋಪಣ್ಣ, ಪ್ರ.ಕಾರ್ಯದರ್ಶಿ ಜಪ್ಪು ಸುಬ್ಬಯ್ಯ ಟ್ರೋಫಿ ಧಾನಿಗಳಾದ ಮೀನು ಉಂಬಯಿ ಅವರು ತೀರ್ಪುಗಾರರು ನೀಡಿದ ಪಟ್ಟಿಯಂತೆ ಬಹುಮಾನ ಘೋಷಣೆ ಮಾಡಿದರು.

ಈ ಸಂದರ್ಭ 2ನೇ ಬಹುಮಾನವನ್ನು ಯುವ ದಸರಾ ಸಮಿತಿಗೆ ಘೋಷಣೆಯಾಗುತ್ತಿದ್ದಂತೆಯೇ ಯುವ ದಸರಾ ಸಮಿತಿಯ ನೂರಾರು ಯುವಕರು ಸಮಿತಿಯ ನಿರ್ಧಾರವನ್ನು ಆಕ್ಷೇಪಿಸಿ ವೇದಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಬಹುಮಾನ ಘೋಷಣೆ ಸರಿಯಾಗಿ ನಡೆದಿಲ್ಲ. ಸಾರ್ವಜನಿಕರು ನಮ್ಮ ದಸರಾ ಮಂಟಪಕ್ಕೆ ಬಹುಮಾನ ಸಿಗಬೇಕೆಂದು ಬೆಂಬಲಿಸಿದ್ದಾರೆ. ಪ್ರತಿ ವರ್ಷವು ಇದೇ ರೀತಿ ಮಾಡುವ ಮೂಲಕ ಅನ್ಯಾಯ ಮಾಡುತ್ತಿರುವಿರಿ ಬಹುಮಾನವನ್ನು ಸ್ವೀಕರಿಸುವದಿಲ್ಲ. ಜನತೆಗೆ ಉತ್ತಮ ಪ್ರದರ್ಶನ ನೀಡಿದ ತೃಪ್ತಿ ನಮಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಕಾವೇರಿ ದಸರಾ ಸಮಿತಿಯ ರಾಮಕೃಷ್ಣ ಅವರು ತೀರ್ಪನ್ನು ಸರಿಯಾಗಿ ನಡೆಸಿದ್ದೇವೆ. ಇದರಲ್ಲಿ ತಾರತಮ್ಯ ಮಾಡಿಲ್ಲ. ತೀರ್ಪುಗಾರರು ನೀಡಿದ ತೀರ್ಪನ್ನೆ ಹೇಳಿದ್ದೇವೆ. ದಯವಿಟ್ಟು ಬಹುಮಾನ ಪಡೆದುಕೊಳ್ಳಿ ಎಂದು ವಿನಂತಿಸಿಕೊಂಡರಾದರೂ ಇವರ ಮಾತಿಗೆ ಯುವ ದಸರಾ ಸಮಿತಿಯ ಯುವಕರು ಸೊಪ್ಪು ಹಾಕದೆ ದ್ವಿತೀಯ ಬಹುಮಾನವನ್ನು ತಿರಸ್ಕರಿಸಿ ವೇದಿಕೆ ಮುಂಭಾಗದಿಂದ ತೆರಳಿದರು.

ಶಾರದಾಂಭ ದಸರಾ ಸಮಿತಿ: ಅರುವತೋಕ್ಲುವಿನ ಶಾರದಾಂಭ ದಸರಾ ಸಮಿತಿಯು ನರಕಾಸುರನ ವಧೆ ಕಥಾ ಸಾರಾಂಶವನ್ನು ನೀಡಿತ್ತು. 3 ಟ್ರ್ಯಾಕ್ಟರ್ 16 ವಿಗ್ರಹಗಳು 6 ವಾಹನಗಳನ್ನು ಬಳಸಿದ್ದರೆ ಪಯ್ಯನೂರಿನ ಲೈಟಿಂಗ್ಸ್ ಅಳವಡಿಸಿ ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಸ್ನೇಹಿತರ ಬಳಗ ಕೊಪ್ಪ: ಪಾಲಿಬೆಟ್ಟ ರಸ್ತೆಯ ಸ್ನೇಹಿತರ ಬಳಗ ಕೊಪ್ಪ ಸಮಿತಿಯು ಮೂಷಿಕ ವಾಹನ,ಋಷಿ ಮುನಿಗಳ ಕಥಾ ಸಾರಾಂಶವನ್ನು ಬಿಂಬಿಸಿದ್ದವು. 2 ಇಟಾಚಿ,2 ಟ್ರ್ಯಾಕ್ಟರ್,19 ವಿಗ್ರಹಗಳನ್ನು ಬಳಸಿದ್ದ ಈ ಸಮಿತಿಯು ಕಣ್ಣೂರಿನ ಕಣ್ಣು ಕೋರೈಸುವ ಲೈಟಿಂಗ್ಸ್ ವ್ಯವಸ್ಥೆ ಕಲ್ಪಿಸಿತ್ತು.

ಕಾಡ್ಯಯ್ಯಪ್ಪ ದಸರಾ ಸಮಿತಿ: ಅರುವತೋಕ್ಲು ಕಾಫಿ ಬೋರ್ಡ್‍ವಿನ ಕಾಡ್ಯಯ್ಯಪ್ಪ ದಸರಾ ಸಮಿತಿಯು ಈ ಬಾರಿ ದಿಂಡಿಗಲ್‍ನಿಂದ ವ್ಯವಸ್ಥೆ ಕಲ್ಪಿಸಿದ್ದು ಗಜಾಸುರನ ವಧೆ, ಶಿವನ ಉಗ್ರ ತಾಂಡವ ಕಥಾ ಸಾರಾಂಶ ನೀಡಿತ್ತು. 12 ವಿಗ್ರಹ ಬಳಸಿದ್ದ ಈ ಸಮಿತಿಯು 1 ಟ್ರ್ಯಾಕ್ಟರ್,2 ವಾಹನವನ್ನು ಬಳಸಿದ್ದವು. ಕೊಲ್ಲಂನಿಂದ ವಿಗ್ರಹಗಳನ್ನು ತರಿಸಿಕೊಂಡು ಉತ್ತಮ ಪ್ರದರ್ಶನ ನೀಡಿದರು.

ನಮ್ಮ ದಸರಾ: ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿಯು ಈ ಬಾರಿ ಸರಳ ದಸರಾದ ಮೂಲಕ ಶೋಭಾಯಾತ್ರೆಗೆ ಪಾಲ್ಗೊಂಡಿದ್ದವು. ಹುಲಿಕಲ್‍ನ ಲೈಟಿಂಗ್ ವ್ಯವಸ್ಥೆ,6 ವಿಗ್ರಹಗಳು,ಒಂದು ಟ್ರ್ಯಾಕ್ಟರ್ ಬಳಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡವು.

ಯುವ ದಸರಾ ಸಮಿತಿ: ಈ ಬಾರಿ 3ನೇ ವಿಭಾಗದ ಯುವ ದಸರಾ ಸಮಿತಿಯು ಆಕರ್ಷಕ ಮಂಟಪವನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದು ನೋಡುಗರನ್ನು ಮಂತ್ರಮುಗ್ದರನ್ನಾಗಿಸಿತ್ತು. ಕಳೆದ ಒಂದು ತಿಂಗಳಿನಿಂದ ಮಂಟಪ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಯುವಕರು ನರಕಾಸುರನ ವಧೆ ಕಥಾ ಸಾರಾಂಶದಿಂದ ಕೂಡಿದ್ದ ಮಂಟಪಕ್ಕೆ ಒಂದು ಕ್ರೈನ್, 2 ಜೆಸಿಬಿ, 4 ಟ್ರ್ಯಾಕ್ಟರ್ ಬಳಸಿ 30 ವಿಗ್ರಹಗಳ ಪ್ರದರ್ಶನ ನೀಡಿದರು.

ಸರಳ ದಸರಾಕ್ಕೆ ಒತ್ತು ನೀಡಿದ್ದ ಕೈಕೇರಿಯ ಭಗವತಿ ದಸರಾ ಸಮಿತಿ, 2ನೇ ವಿಭಾಗದ ಸರ್ವರ ದಸರಾ ಸಮಿತಿ, ಮಾರ್ಕೆಟ್‍ನ ನವಚೇತನ ದಸರಾ ಸಮಿತಿ ಹಾಗೂ ನಾಡ ಹಬ್ಬ ದಸರಾ ಸಮಿತಿಯ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಜನರ ಮನಗೆದ್ದವು.

ದಿಢೀರ್ ಪ್ರತಿಭಟನೆ

ದ್ವಿತೀಯ ಬಹುಮಾನಕ್ಕೆ ತೃಪ್ತರಾಗದ 2ನೇ ವಿಭಾಗದ ಯುವ ದಸರಾ ಸಮಿತಿಯ ಪದಾಧಿಕಾರಿಗಳು, ಯುವಕರು ಬೈ ಪಾಸ್ ರಸ್ತೆಯಲ್ಲಿ ಮುಂಜಾನೆ ಕೆಲ ಕಾಲ ಪ್ರತಿಭಟನೆ ನಡೆಸಿ ತಮ್ಮ ನೋವನ್ನು ತೋಡಿಕೊಂಡರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಜಯಕುಮಾರ್, ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳು ಯುವಕರನ್ನು ಸಮದಾನ ಪಡಿಸುವ ಪ್ರಯತ್ನ ನಡೆಸಿದರು. ಸ್ಥಳಕ್ಕೆ ಮಾಧ್ಯಮ ಸ್ನೇಹಿತರು ಆಗಮಿಸುವಂತೆ ಪಟ್ಟು ಹಿಡಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಬೈ ಪಾಸ್ ರಸ್ತೆ ಜಂಕ್ಷನ್‍ಗೆ ಪತ್ರಕರ್ತರು ತೆರಳುತ್ತಿದ್ದಂತೆಯೇ ಸಮಿತಿಯ ಯುವಕರ ತಾಳ್ಮೆಯ ಕಟ್ಟೆ ಒಡೆದು ಹೋಗಿತ್ತು. ಒಂದೇ ಸಮನೆ ಆದ ಅನ್ಯಾಯವನ್ನು ಮಾದ್ಯಮದ ಮುಂದೆ ಬಿಚ್ಚಿಟ್ಟರು ಕಾವೇರಿ ದಸರಾ ಸಮಿತಿಯು ಸರಿಯಾದ ರೀತಿಯಲ್ಲಿ ತೀರ್ಪನ್ನು ನೀಡುತ್ತಿಲ್ಲ. ಪ್ರತಿ ವರ್ಷ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಂದು ತಿಂಗಳಿನಿಂದ ಇದಕ್ಕಾಗಿ ಅನೇಕ ಯುವಕರು ದುಡಿದಿದ್ದಾರೆ. ಆದರೆ ಬಹುಮಾನವನ್ನು ನೀಡುವಾಗ ತಾರತಮ್ಯ ಮಾಡಿದ್ದಾರೆಂದು ಕಾವೇರಿ ದಸರಾ ಸಮಿತಿಯ ಕಾರ್ಯವೈಖರಿಯ ಬಗ್ಗೆ ಆರೋಪಿಸಿದರು. ನಂತರ ಪತ್ರಕರ್ತರ ಮಧ್ಯಸ್ಥಿಕೆಯಿಂದ ವಾತಾವರಣ ತಿಳಿಗೊಂಡಿತ್ತು. ತಮ್ಮ ಮಂಟಪದೊಂದಿಗೆ ವಾಪಾಸ್ಸು ಹಿಂದಿರುಗಿದರು.

ನಗರದಲ್ಲಿ ನೂರಾರು ರಸ್ತೆ ಬದಿಯ ವ್ಯಾಪಾರಿಗಳು ತಮ್ಮ ವ್ಯಾಪಾರ ನಡೆಸಿದರು. ಬಲೂನ್,ಆಟಿಕೆ,ಸಾಮಾಗ್ರಿಗಳಿಗೆ ಬೇಡಿಕೆ ಹೆಚ್ಚಾಗಿತ್ತು. ನಗರದಲ್ಲಿ ಲಾಡ್ಜ್,ಹೊಟೇಲ್‍ಗಳು ಭರ್ತಿಯಾಗಿದ್ದವು. ಡಿವೈಎಸ್ಪಿ ಜಯಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಮಫ್ತಿಯಲ್ಲಿ ಸಾರ್ವಜನಿಕರ ಚಲನ ವಲನಗಳ ಬಗ್ಗೆ ನಿಗಾ ವಹಿಸಿದ್ದರು. ಮುಂಜಾನೆಯ 6 ಗಂಟೆಯಿಂದ ವಾಹನ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಮಳೆರಾಯ ಬಿಡುವು ನೀಡಿದ್ದ ಹಿನ್ನೆಲೆಯಲ್ಲಿ ಆಯೋಜಕರಿಗೆ ನೆಮ್ಮದಿ ನೀಡಿತ್ತು. ಪ್ರತಿ ಮಂಟಪಕ್ಕೆ ಚೆಸ್ಕಾಂ ಸಿಬ್ಬಂದಿಗಳು ಖುದ್ದು ಹಾಜರಿದ್ದು ವಿದ್ಯುತ್ ತೊಂದರೆಯ ಬಗ್ಗೆ ಮುಂಜಾಗೃತೆ ವಹಿಸಿದ್ದರು. ಶೋಭಾಯಾತ್ರೆಗೆ 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನತೆ ನಗರಕ್ಕೆ ಆಗಮಿಸಿದ್ದರು.

-ಹೆಚ್.ಕೆ. ಜಗದೀಶ್