ಮೂರ್ನಾಡು, ಅ. 9 : ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯೋಜಿಸಲಾದ 26ನೇ ವರ್ಷದ ಆಯುಧ ಪೂಜಾ ಸಮಾರಂಭವು ಅದ್ಧೂರಿಯಾಗಿ ಜರುಗಿತು.

ಮೂರ್ನಾಡು ಪಾಂಡಾಣೆ ಮೈದಾನದಲ್ಲಿ ನಿರ್ಮಿಸಿದ ಭವ್ಯ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಆಯುಧ ಪೂಜಾ ಸಮಾರಂಭವನ್ನು ಸಂಘದ ಗೌ. ಅಧ್ಯಕ್ಷ ಎನ್.ಕೆ ಕುಂಞÂರಾಮ ಉದ್ಘಾಟಿಸಿದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಮಾತನಾಡಿ ಆಯುಧ ಪೂಜೆಯನ್ನು ಜಾತಿ ಧರ್ಮದ ಭೇದವಿಲ್ಲದೆ ಸಾರ್ವಜನಿಕವಾಗಿ ನಡೆಯುವ ಆಚರಣೆಯು ಸಂಘದಲ್ಲಿನ ಸಾಮರಸ್ಯತೆಯನ್ನು ಎತ್ತಿ ತೋರಿಸುತ್ತದೆ. ಸಂಘವು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾಜಿಕ ಕಳಕಳಿಯನ್ನು ಹೊಂದಿದೆ ಹಾಗೆಯೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವದರೊಂದಿಗೆ ಸಂಸ್ಕøತಿ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೈಜೋಡಿಸುತ್ತಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಮಾತನಾಡಿ ಸಮಾಜದಲ್ಲಿ ನಾಗರಿಕತೆಯೆ ಇಲ್ಲದಂತಾಗಿದೆ. ಕಲೆ, ಸಾಹಿತ್ಯ, ಜನಪದ, ಸಂಗೀತಗಳು ಇದ್ದರೆ ಮಾತ್ರ ಅಲ್ಲಿ ನಾಗರಿಕತೆಯನ್ನು ಕಾಣಬಹುದು. ಆದರೆ ಈಗಿನ ನಾಗರಿಕತೆ ತಾನು ತನ್ನ ಸಂಸಾರವೆಂಬ ಸ್ವಾರ್ಥ ತುಂಬಿದ ಶ್ರೀಮಂತಿಕೆ ಯಾಗಿದೆ. ಈಗಿನ ಮಕ್ಕಳು ಕೇವಲ ಮೊಬೈಲ್‍ಗಳ ದಾಸರಾಗಿದ್ದು, ಪ್ರೀತಿ, ವಿಶ್ವಾಸ, ಕಲೆ ಸಾಹಿತ್ಯಗಳಿಂದ ದೂರ ಸರಿಯುತ್ತಿದ್ದಾರೆ. ಕೊಡಗಿನ ಜನ ಬೌದ್ಧಿಕ ದಿವಾಳಿಯತ್ತ ಸಾಗುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಾಹ ವಿಚ್ಛೇದನಗಳು ಸಾಮಾನ್ಯವಾಗಿವೆ. ಇದಕ್ಕೆ ಪೋಷಕರು ಪ್ರೋತ್ಸಾಹ ನೀಡಬಾರದು. ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಸುಖಿ ಸಮಾಜವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೆಮ್ಮಂಡ ಪವಿತ್ರ ಕುಂಞಪ್ಪ, ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಬಿ.ಆರ್. ಲಿಂಗಪ್ಪ, ಸರ್ವೆ ಅಧಿಕಾರಿ ಬಾನಂಗಡ ಅರುಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಗಿರೀಶ್ ಕಿಗ್ಗಾಲು, ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಕುಂಞÂ ಅಬ್ದುಲ್ಲ, ಮೂರ್ನಾಡು ಗ್ರಾಮ ಲೆಕ್ಕಿಗರಾದ ಕು. ಅಕ್ಷತ ಬಿ. ಶೆಟ್ಟಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದರು.

ವೀರಾಜಪೇಟೆಯ ಮುಳುಗು ತಜ್ಞ ಸಿದ್ಧಲಿಂಗ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಆಯುಧ ಪೂಜೋತ್ಸವದ ಅಂಗವಾಗಿ ಎರಡು ಚಕ್ರ, ಮೂರು ಚಕ್ರ, ನಾಲ್ಕು ಚಕ್ರ ಮತ್ತು ಆರು ಚಕ್ರ ಅಲಂಕೃತ ವಾಹನಗಳು ಮತ್ತು ಅಲಂಕೃತ ಅಂಗಡಿಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸಿದ ವಾಹನ ಮತ್ತು ಅಂಗಡಿಗಳಿಗೆ ನಗದು ಬಹುಮಾನಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬುಟ್ಟಂಡ ಪಿ. ಸುನೀಲ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಬಿ. ಕಲಾವತಿ ಪೂವಪ್ಪ, ಕರ್ನಾಟಕ ಸೆರೊ ಮಲಬಾರ್ ಕ್ಯಾಥೊಲಿಕ್ ಜಿಲ್ಲಾಧ್ಯಕ್ಷ ಎನ್.ಒ. ಮ್ಯಾಥ್ಯು, ಸುಗುಣಬಾರ್ ಮಾಲೀಕ ಅವರೆಮಾದಂಡ ಸುಗುಣ ಸುಬ್ಬಯ್ಯ, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಗೌ. ಅಧ್ಯಕ್ಷ ಎನ್.ಕೆ ಕುಂಞÂರಾಮ, ಅಡ್ಡಂಡ ಅನಿತ ಕಾರ್ಯಪ್ಪ, ಶಿಕ್ಷಕರಾದ ಚೆಟ್ಟಿಮಾಡ ಗೋಪಾಲ್, ಸಂಘದ ಕಾರ್ಯದರ್ಶಿ ಬಿ. ಅಶ್ವಥ್ ರೈ, ಉಪಾಧ್ಯಕ್ಷ ಸುಬ್ರಮಣಿ, ಖಜಾಂಚಿ ಎ.ಪಿ. ಲೋಕೇಶ್ ಹಾಗೂ ಸಹ ಕಾರ್ಯದರ್ಶಿ ಎನ್.ಎನ್. ಶರಣು ಉಪಸ್ಥಿತರಿದ್ದರು.

ಸಮಾರಂಭಕ್ಕೆ ಮೊದಲು ಅಲಂಕೃತ ವಾಹನಗಳಿಗೆ ಪೂಜಾ ಕಾರ್ಯಕ್ರಮ ನಡೆಯಿತು. ನಂತರ ಅಂಬಾರಿ ಹೊತ್ತ ಆನೆ, ತೋರ ಗ್ರಾಮದಲ್ಲಿ ಭೂಕುಸಿತ, ಮಹಿಷಾಸುರನ ವದೆ, ಗಜಾಸುರನ ವದೆ, ಕೈಲಾಸ ಪರ್ವತ, ಶಬರಿಮಲೆ, ಮದ್ಯಪಾನದಿಂದ ಆದ ಬೈಕ್ ಅಪಘಾತ, ಬಸ್ಸಿಗೆ ಸಿಲುಕಿ ಮೃತಪಟ್ಟ ಆನೆ ಹೀಗೆ ಹಲವು ಸ್ಥಬ್ದ ಚಿತ್ರಗಳಿಂದ ಅಲಂಕೃತಗೊಂಡ ವಾಹನಗಳ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿತು. ಕೇರಳದ ತಂದೋವನಂ ಡಿಜಿಟಲ್ ತಂಬೂಲ ಬ್ಯಾಂಡ್ ವಾದ್ಯಗೋಷ್ಠಿಯು ಮೆರವಣಿಗೆಗೆ ಸಾಥ್ ನೀಡಿತು. ಮೂರ್ನಾಡಿನ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರು ಮೆರವಣಿಗೆಯನ್ನು ವೀಕ್ಷಿಸಿದರು. ಸ್ಥಳೀಯ ಪ್ರತಿಭೆಗಳ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಮಧ್ಯರಾತ್ರಿ ಯವರೆಗೆ ಕೂರ್ಗ್ ಮೆಲೋಡಿಯಸ್ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮವು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಮನಸೂರೆ ಗೊಳಿಸಿತು. ಶಿಕ್ಷಕಿ ಸುನಂದಿನಿ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಬಿ. ಅಶ್ವಥ್ ರೈ ಸ್ವಾಗತಿಸಿ, ವರದಿ ವಾಚಿಸಿದರು. ಕುಸುಮ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.