ವೀರಾಜಪೇಟೆ, ಅ. 9: ಕೇರಳಿಗರು ಎಂದು ತಿಳಿದು ಕಾರಿನಲ್ಲಿ ಸಾಗುತ್ತಿದ್ದ ಪ್ರಯಾಣಿಕರ ಮೇಲೆ ಗುಂಪು ಕಟ್ಟಿ ಯುವಕರು ದಾಂಧಲೆ ನಡೆಸಿದ ಘಟನೆ ವೀರಾಜಪೇಟೆ ನಗರದಲ್ಲಿ ತಡರಾತ್ರಿ ನಡೆದಿದೆ.
ವೀರಾಜಪೇಟೆ ಬಿಳುಗುಂದ ಗ್ರಾಮ ಪಂಚಾಯಿತಿಯ ನಲ್ವತ್ತೊಕ್ಲು ಗ್ರಾಮದ ನಿವಾಸಿಗಳಾದ ಜಸೀನಾ ಸಫೀನಾ, ಸಿದ್ದೀಕ್ ಮತ್ತು ಷರ್ಮಿದ್ ಹಲ್ಲೆಗೊಳಗಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು. ಘಟನೆಯ ವಿವರ: ತಾ.7ರಂದು ನಲ್ವತೊಕ್ಲು ಗ್ರಾಮ ನಿವಾಸಿಗಳಾದ ಸಿದ್ದೀಕ್ ಮತ್ತು ಷರ್ಮಿದ್ ಕುಟುಂಬದವರು ತಮ್ಮ ಕಾರು ಸಂಖ್ಯೆ ಕೆಎಲ್-56 ಯು-869 ರಲ್ಲಿ ತಮ್ಮ ಕುಟುಂಬದ ಸದಸ್ಯರೊಬ್ಬರ ಮದುವೆಗೆಂದು ಆಭರಣ ಮತ್ತು ಬಟ್ಟೆ ಖರೀದಿ ಮಾಡಲು ಕೇರಳ ರಾಜ್ಯದ ಇರಿಟ್ಟಿಗೆ ತೆರಳಿದ್ದರು. ಕುಟುಂಬದ ಸದಸ್ಯರೊಂದಿಗೆ ಮದುವೆಯ ಸಾಮಗ್ರಿಗಳನ್ನು ಖರೀದಿಸಿ ಸಂಜೆ ವೇಳೆಗೆ ಪೆರುಂಬಾಡಿ ಮಾರ್ಗವಾಗಿ ವೀರಾಜಪೇಟೆ ನಗರಕ್ಕೆ ಬರುತ್ತಿದ್ದ ವೇಳೆಯಲ್ಲಿ ಕೇರಳ ರಾಜ್ಯದ ನೊಂದಾಣಿಯಾದ ವಾಹನವೆಂದು ತಿಳಿದು ವೀರಾಜಪೇಟೆ ನಗರದ ಯುವಕರ ಗುಂಪು ವಾಹನ ಸಂಖ್ಯೆ ಕೆಎ-05 ಜೆಡ್-3660 ರಲ್ಲಿ ಹಿಂಬದಿ ವಾಹನಕ್ಕೆ ಸ್ಥಳಾವಕಾಶ ನೀಡಲಿಲ್ಲ ಎಂಬದಾಗಿ ಅರ್ಥೈಸಿ ವಾಹನವನ್ನು ಹಿಂಬಾಲಿಸಿಕೊಂಡು ತೆರಳಿದರು. ನಗರದ ಮಲಬಾರ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ವಾಹನವನ್ನು ಅಡ್ಡಗಟ್ಟಿದರು. ಕಾರಿನ ಚಾಲನೆಯಲ್ಲಿದ್ದ ಷರ್ಮಿದ್ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳೂ ಸೇರಿದಂತೆ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಸೀನಾ ಸಫೀನಾ ಸಿದ್ದೀಕ್, ಷರ್ಮಿದ್ ಅವರುಗಳಿಗೆ ಮಾರಣಾಂತಿಕ ಗಾಯಗಳಾಗಿದ್ದು, ವೀರಾಜಪೇಟೆ ಸರ್ಕಾರಿ ಅಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತಿದ್ದರೆ, ಪ್ರಕರಣಕ್ಕೆ ಸಂಬಂದಿಸಿದಂತೆ ವೀರಾಜಪೇಟೆ ಪಟ್ಟಣದ ಪ್ರವೀಣ್ ಎಂ.ಎನ್. ಪ್ರಸಾದ್, ಬಿ.ಎಂ. ವಿಜು ಮತ್ತು ರದೀಶ್ ಎಂಬ ಯುವಕರ ಮೇಲೆ ಗುಂಪು ಹಲ್ಲೆ ಪ್ರಕರಣ ಎಂದು ವೀರಾಜಪೇಟೆ ನಗರ ಪೊಲೀಸರು ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 8 ಮಂದಿ ಅರೋಪಿಗಳಿದ್ದು, ಉಳಿದ ನಾಲ್ಕು ಮಂದಿ ಅರೋಪಿಗಳು ತಲೆಮರೆಸಿ ಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
-ಕೆ.ಕೆ.ಎಸ್ ವೀರಾಜಪೇಟೆ