ಮಡಿಕೇರಿ, ಅ. 9: ಮಡಿಕೇರಿಯ ದಸರಾ ನಾಡಹಬ್ಬಕ್ಕೆ ಮೆರುಗು ನೀಡಿದ್ದ ವಿಜಯದಶಮಿ ರಾತ್ರಿಯ ಮಂಟಪೋತ್ಸವದಲ್ಲಿ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಮಂಟಪ ಪ್ರಥಮ, ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದ್ವಿತೀಯ ಹಾಗೂ ಕೋಟೆ ಶ್ರೀ ಮಹಾಗಣಪತಿ ಮಂಟಪ ತೃತೀಯ ಸ್ಥಾನದೊಂದಿಗೆ ಮನ್ನಣೆ ಪಡೆದವು. ಪ್ರಥಮ ಬಹುಮಾನ ಪಡೆದ ಕಲಾಕೃತಿಯು ನರಸಿಂಹನಿಂದ ಹಿರಣ್ಯ ಕಶಿಪು ವಧೆಯ ಕಥೆಯೊಂದಿಗೆ; ಆಧುನಿಕ ತಂತ್ರಜ್ಞಾನದಿಂದ ಕೂಡಿದ ಮಂಟಪ ಸಹಿತ ವಿದ್ಯುತ್ ಅಲಂಕಾರನ ಸೊಬಗಿನಿಂದ ಆಕರ್ಷಿಸಿತು.ದ್ವಿತೀಯ ಬಹುಮಾನ ಪಡೆದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಕಲಾಕೃತಿಯು, ಸುಬ್ರಹ್ಮಣ್ಯನಿಂದ ತಾರಕಾಸುರನ ಸಂಹಾರದ ಕಥೆಯೊಂದಿಗೆ ಆಕರ್ಷಕ ಮಂಟಪ ಸಹಿತ ಹುಲಿವೇಷಧಾರಿ ಕಲಾತಂಡದ ಹಿಮ್ಮೇಳ ಹೊಂದಿತ್ತು.

ತೃತೀಯ ಬಹುಮಾನ ಪಡೆದ ಕೋಟೆ ಗಣಪತಿ ಸನ್ನಿಧಿಯ ಮಂಟಪವು, ಮಯೂರೇಶ್ವರನಿಂದ ಶಿಖಂಡಿ ಪಕ್ಷಿಯು ಮಯೂರನಾಗಿ ರೂಪುಗೊಳ್ಳುವ ಕಥೆಯನ್ನು ಹೆಣೆದುಕೊಂಡಿತ್ತು. ಇನ್ನುಳಿದಂತೆ ಪೇಟೆ ಶ್ರೀರಾಮಮಂದಿರ ಕಲಾಕೃತಿಯು ಅರ್ಧನಾರೀಶ್ವರ, ಸದ್ಭಕ್ತರಿಗೆ ದರ್ಶನ

(ಮೊದಲ ಪುಟದಿಂದ) ನೀಡುವ ಮೂಲಕ ಗಮನ ಸೆಳೆದರೆ; ಶ್ರೀ ಚೌಡೇಶ್ವರಿ ದೇವಾಲಯ ಮಂಟಪವು ದೇವಿ ಮಹಿಷಾಸುರನನ್ನು ಸಂಹರಿಸುವ ಅಂಶವನ್ನು ಹೊಂದಿತ್ತು.

ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯ ಮಂಟಪವು; ಕಾಲಾತೀತನಾದ ಶಿವನು ತ್ರಿಪುರಸುರರನ್ನು ವಧಿಸುವ ಕಲಾಕೃತಿಯೊಂದಿಗೆ ಗಮನ ಸೆಳೆಯಿತು. ಕರವಲೆ ಬಾಡಗ ಗ್ರಾಮದ ಶ್ರೀ ಭಗವತಿ ಮಹಿಷಮರ್ಧಿನಿ ಸನ್ನಿಧಿಯ ಮಂಟಪವು ಭ್ರಮರಾಂಬಿ üಕೆಯಿಂದ ಅರುಣಾಸುರ ರಕ್ಕಸನ ವಧೆಯ ಕಲಾಕೃತಿಯಿಂದ ಕೂಡಿತ್ತು.

ಇಲ್ಲಿನ ಕೋಟೆ ಶ್ರೀ ಮಾರಿಯಮ್ಮ ದೇವಾಲಯದ ಮಂಟಪವು; ಹಯಗ್ರಿವನಿಂದ ದಾನವ ಮರ್ಧನದ ಕಥಾ ಸರಣಿಯಿಂದ ಆಕರ್ಷಿಸಲ್ಪಟ್ಟರೆ; ದೇಚೂರು ಶ್ರೀ ರಾಮ ಮಂದಿರದ ಮಂಟಪವು ಪಂಚಮುಖಿ ಆಂಜನೇಯನಿಂದ ಕೂಡಿದ ಕಥೆಯನ್ನು ಪ್ರಚುರಪಡಿಸಿತು.

ಇನ್ನು ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶ್ರೀ ಕಂಚಿ ಕಾಮಾಕ್ಷಿ - ಮುತ್ತು ಮಾರಿಯಮ್ಮ ದೇವಾಲಯದ ಮಂಟಪವು; ಉಗ್ರನರಸಿಂಹನಿಂದ ಹಿರಣ್ಯ ಕಶಿಪು ವಧೆಯ ಕಥೆಯೊಂದಿಗಿನ ಕಲಾಕೃತಿ ಯಿಂದ ಗಮನ ಸೆಳೆಯಿತು.

ಅಲ್ಲಲ್ಲೇ ನಿಂತ ಮಂಟಪ : ಈ ಬಾರಿಯ ಮಂಟಪೋತ್ಸವ ವೇಳೆ ಪೈಪೋಟಿಗೆ ಸೀಮಿತವಾಗಿ; ತೀರ್ಪುಗಾರರ ಆಗಮನಕ್ಕೆ ತಕ್ಕ ಸಂದರ್ಭವಷ್ಟೇ ಕಲಾಕೃತಿಗಳ ಪ್ರದರ್ಶನ ನಡೆಯಿತಲ್ಲದೆ; ಆ ಬಳಿಕ ಕೆಲವು ಮಂಟಪಗಳು ನಿಗದಿತ ಸ್ಥಳಗಳಿಂದ ಮುಂದೆಯೂ ಸಾಗಲಿಲ್ಲ;

ಅಂತಿಮವಾಗಿ ಬಹುಮಾನ ಘೋಷಣೆ ಯಾಗುತ್ತಿದ್ದಂತೆಯೇ ಅಸಮಾಧಾನ ಹೊಗೆಯಾಡತೊಡಗಿತಲ್ಲದೆ, ಅಲ್ಲಲ್ಲಿ ಕಲಾಕೃತಿಗಳನ್ನು ಬಿಚ್ಚಿ ಲಾರಿಗಳಿಗೆ ತುಂಬುತ್ತಿದ್ದ ಸನ್ನಿವೇಶ ಕಂಡು ಬಂತು.