ಕೂಡಿಗೆ, ಅ. 7: ಕೂಡಿಗೆಯ ಶ್ರೀ ದಂಡಿನಮ್ಮ ನವರಾತ್ರಿ ಪೂಜಾ ಸಮಿತಿ ವತಿಯಿಂದ ನವರಾತ್ರಿ ಪೂಜಾ ಕಾರ್ಯಕ್ರಮವು ದೇವಾಲಯದ ಆವರಣದಲ್ಲಿ ನಡೆಯಿತು.
ನವರಾತ್ರಿ ಪೂಜೆಯ ಅಂಗವಾಗಿ ದಂಡಿನಮ್ಮ ತಾಯಿಗೆ ಅಭಿಷೇಕ ಮಾಡಿದ ನಂತರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವಾಲಯದ ಆವರಣದ ಮುಂಭಾಗದಲ್ಲಿ ಬಸವೇಶ್ವರ ಮತ್ತು ದಂಡಿನಮ್ಮ ದೇವಾಲಯ ಸಮಿತಿ ಅಧ್ಯಕ್ಷ ಸೋಮಶೇಖರ್ ದಂಪತಿಗಳ ಸಮ್ಮುಖದಲ್ಲಿ ಹೋಮಹವನಗಳು ನಡೆದವು. ನಂತರ ಒಂದು ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆದವು.
ಪೂಜಾ ಕಾರ್ಯಕ್ರಮದಲ್ಲಿ ಕೂಡಿಗೆ, ಕೋಟೆ, ಮಲ್ಲೇನಹಳ್ಳಿ, ಹೆಗ್ಡಳ್ಳಿ ಹಾಗೂ ಇನ್ನಿತರ ಗ್ರಾಮಗಳ ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ದಂಡಿನಮ್ಮ ನವರಾತ್ರಿ ಪೂಜಾ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.
ಹುದುಗೂರು: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಶ್ರೀ ಮಹಾದೇವಿಯ ಸನ್ನಿಧಿಯಲ್ಲಿ ನವರಾತ್ರಿಯ ಅಂಗವಾಗಿ ವಿಶೇಷ ನವರಾತ್ರಿಯ ಪೂಜಾ ಕಾರ್ಯಕ್ರಮ ನಡೆದವು. ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ದೊಂದಿಗೆ ಕುಂಕುಮಾರ್ಚನೆ ನಡೆಯಿತು. ದೇವಿಯ ಸನ್ನಿಧಿಯಲ್ಲಿ ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ ನಂತರ ಚಂಡಿಕಾ ಹೋಮ ನಡೆದವು. ಅಲ್ಲದೆ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ನಂತರ ಭಕ್ತವೃಂದದವರಿಗೆ ಅನ್ನಸಂತರ್ಪಣೆ ನಡೆಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಕುಶಾಲನಗರ ಕೂಡಿಗೆ ಹಾರಂಗಿ, ಮಾದ್ಲಾಪುರ, ಹುದುಗೂರು ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದರು.
ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ. ಕಾರ್ಯದರ್ಶಿ ಸುರೇಶ್ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಹಾಗೂ ಮಹಿಳಾ ಘಟಕಗಳ ಪದಾಧಿಕಾರಿಗಳು ಗ್ರಾಮದ ಹಿರಿಯ ಮುಖ್ಯಸ್ಥರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೂಜಾ ಕೈಂಕರ್ಯವನ್ನು ಕೇರಳದ ಶ್ರೀನಾಥ ತಂಡ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಸಮಿತಿಯ ನಿರ್ದೇಕರು ಹಾಜರಿದ್ದರು.
ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿಯ ರಾತ್ರಿ ದೇವಿಗೆ ರಾಜರಾಜೇಶ್ವರಿ ಅಲಂಕಾರದಲ್ಲಿ ಪ್ರಾಕಾರೋತ್ಸವ ನೆರವೇರಿತು.
ನಂತರ ಶ್ರೀ ದುರ್ಗಾ ಕಲ್ಫೋಕ್ತ ಪೂಜೆ, ಲಲಿತಾ ಸಹಸ್ರನಾಮ, ಚಂಡಿಕಾ ಪಾರಾಯಣ, ಮಹಾಮಂಗಳಾರತಿ ನೆರವೇರಿತು. ಅರ್ಚಕ ಮಹಾಬಲೇಶ್ ಜೋಷಿ ಪೂಜಾ ಕೈಂಕರ್ಯ ನೆರವೇರಿಸಿದರು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಆಡಳಿತ ಮಂಡಳಿ ಪದಾಧಿಕಾರಿಗಳು, ಚೌಡೇಶ್ವರಿ ಮಹಿಳಾ ಬಳಗ ಹಾಗೂ ದೇವಾಂಗ ಸಮುದಾಯದವರು ಹಾಜರಿದ್ದರು.