ಗುಡ್ಡೆಹೊಸೂರು, ಅ. 7: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ಮೀನುಕೊಲ್ಲಿ ಹಾಡಿಯಲ್ಲಿ ಬುಡಕಟ್ಟು ಜನಾಂಗದ ಸಮ್ಮಿಲಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತಿಂಥಣಿ ಕನಕ ಶಾಖಾಮಠದ ಸಿದ್ಧರಾಮನಂದ ಸ್ವಾಮೀಜಿ ಹಾಜರಿದ್ದು ಜೀತಪದ್ಧತಿಯ ಬಗ್ಗೆ ಮಾತನಾಡಿ, ಇದ್ದವರು ಇಲ್ಲದವರನ್ನು ದುಡಿಸಿಕೊಂಡು ಆದಿವಾಸಿ ಜನಾಂಗದವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಆದಿವಾಸಿ ಜನಗಳಿಗೆ ಒಳಮೀಸಲಾತಿ ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವದಾಗಿ ಸ್ವಾಮೀಜಿಗಳು ಹೇಳಿದರು. ಕುಡಿತದಿಂದ ಆರೋಗ್ಯ ಹಾಳಾಗುವದಲ್ಲದೆ ಸಂಸಾರಗಳು ಕೂಡ ಹಾಳಾಗುತ್ತವೆ. ಕುಡಿತಕ್ಕೆ ಗಿರಿಜನರು ಬಲಿಯಾಗದಂತೆ ಕರೆ ನೀಡಿದರು.

ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ಮಾತನಾಡಿ, ಬುಡಕಟ್ಟು ಜನಾಂಗದವರಿಗೆ ಸರಕಾರದಿಂದ ದೊರೆಯುವ ಸವಲತ್ತುಗಳು ಸರಿಯಾಗಿ ತಲುಪುತ್ತಿಲ್ಲ. ಅರಣ್ಯ ವಾಸಿಗಳಿಗೆ ಹಕ್ಕುಪತ್ರ ನೀಡಲು ಕಾನೂನಿನಲ್ಲಿ ಅವಕಾಶವಿದ್ದರೂ ಅರಣ್ಯ ಇಲಾಖೆಯವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಕೊಡಗು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಹೇಶ್, ಮುತ್ತಮ್ಮ, ಸಂಘದ ಕಾರ್ಯದರ್ಶಿ ಗಂಗಾಧರ, ಖಜಾಂಜಿ ಟಿ.ಜಿ. ಶಿವಣ್ಣ, ಗ್ರಾ.ಪಂ. ಸದಸ್ಯರಾದ ತಮ್ಮಯ್ಯ, ಕಮಲಮ್ಮ, ಕೃಷ್ಣಮೂರ್ತಿ, ವಸಂತ, ಉಮೇಶ್, ವಿವೇಕ್, ನಾಗೇಶ್, ಮಂಜುನಾಥ, ಕುಮಾರ, ರಘು, ಗಿರೀಶ್ ಮುಂತಾದವರು ಹಾಜರಿದ್ದರು.

ಶ್ರೀಗಳು ಹಾಡಿಯ ಜನರಿಗೆ ಹೊದಿಕೆಗಳನ್ನು ವಿತರಿಸಿದರು. ಸುತ್ತಮುತ್ತಲ ಹಾಡಿಯ ಮಂದಿ ಪಾಲ್ಗೊಂಡಿದ್ದರು.