ಕೂಡಿಗೆ, ಅ.6: ಮೈಸೂರು ಜೆಎಸ್‍ಎಸ್ ಆಸ್ಪತ್ರೆ ಮುಂಭಾಗದಲ್ಲಿ ಕರ್ತವ್ಯ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಸಿಪಾಯಿ ಗ್ರ್ಯಾಂಡ್ ಹೊಟೇಲ್‍ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಕೂಡಗು ಜಿಲ್ಲಾ ಪೊಲೀಸ್ ಅಧಿಕಾರಿ ಹಾಗೂ ಕೂಡಿಗೆ ಕ್ರೀಡಾಶಾಲೆಯ ತರಬೇತುದಾರ ಮತ್ತು ಸಹೋದ್ಯೋಗಿ ಬೆಂಕಿ ನಂದಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಕೊಡಗು ಜಿಲ್ಲೆಯ ಎ.ಎಸ್.ಐ. ಆಗಿದ್ದು, ಕೂಡಿಗೆ ಕ್ರೀಡಾ ಶಾಲೆಯ ಅಥ್ಲೇಟಿಕ್ ತರಬೇತಿದಾರರಾದ ಅಂತೋಣಿ ಡಿಸೋಜ ಅವರು ದಸರಾ ಕ್ರೀಡಾಕೂಟದ ವಸತಿ ವ್ಯವಸ್ಥೆಯ ಸದಸ್ಯರಾಗಿದ್ದು ಕರ್ತವ್ಯ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಸಿಪಾಯಿ ಗ್ರ್ಯಾಂಡ್ ಹೊಟೇಲ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಕಾರಿನಲ್ಲಿ ಕುಳಿತಿದ್ದ ಸಹೋದ್ಯೋಗಿ ತರಬೇತುದಾರ ಈ ಬಗ್ಗೆ ಅವರಿಗೆ ತಿಳಿಸಿದ್ದು, ನಂತರ ಕಾರು ನಿಲ್ಲಿಸಿ ತಕ್ಷಣ ಸಿಪಾಯಿ ಗ್ರ್ಯಾಂಡ್ ಹೊಟೇಲಿನ ಮೂರನೇ ಮಹಡಿಯಲ್ಲಿ ಸೆಕ್ಯುರಿಟಿಯನ್ನು ಕರೆದು ವಿದ್ಯುತನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ಒಳಗೆ ಹೋಗಿ ಹೊಟೇಲ್ ಸಿಬ್ಬಂದಿಯೊಂದಿಗೆ ಮೂರನೇ ಮಹಡಿಗೆ ತೆರಳಿ ಬೆಂಕಿ ನಂದಿಸುವ ಸಿಲಿಂಡರ್‍ನಿಂದ ಶೌಚಾಲಯದ ಗ್ಲಾಸ್ ಅನ್ನು ಒಡೆದು ಆ ಕೋಣೆಯ ಮೂಲಕ ಇನ್ನೊಂದು ಕೋಣೆಯನ್ನು ಪ್ರವೇಶಿಸಿ ಬೆಂಕಿಯನ್ನು ನಂದಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಅಂತೋಣಿ ಡಿಸೋಜ ಅವರ ಸಮಯಪ್ರಜ್ಞೆ ಸಾಹಸ ಧೈರ್ಯವನ್ನು ಮೆಚ್ಚಿದ ಹೊಟೇಲ್ ಮಾಲೀಕರಾದ ಯಶಸ್ವಿನಿ ಸೋಮಶೇಖರ್ ಅವರು ಅಭಿನಂದಿಸಿ, ಶ್ಲಾಘನೀಯ ಪತ್ರವನ್ನು ನೀಡಿದ್ದಾರೆ. ಈ ಘಟನೆಯನ್ನು ತಿಳಿದ ಮೈಸೂರಿನ ಕ್ರೀಡಾ ಇಲಾಖೆ ಆಯುಕ್ತರು, ಇಲಾಖೆಯ ಅಧಿಕಾರಿಗಳು ಹಾಗೂ ಮೃಸೂರು ಪೊಲೀಸ್ ಇಲಾಖೆ ಮೈಸೂರಿನಲ್ಲಿ ಅಭಿನಂದಿಸಿದೆ. ಕೂಡಿಗೆ ಕ್ರೀಡಾ ಶಾಲೆಯ, ತರಬೇತುದಾರರು ಮತ್ತು ಮೈಸೂರು ಕ್ರೀಡಾ ಕೇಂದ್ರದ ತರಬೇತುದಾರರು ಅಧೀಕ್ಷಕರು ಕೂಡಿಗೆ ಕ್ರೀಡಾಶಾಲೆಯ ಮುಖ್ಯ ಶಿಕ್ಷಕರು, ಸಿಬ್ಬಂದಿ ಶ್ಲಾಘಿಸಿದ್ದಾರೆ.