ಗೋಣಿಕೊಪ್ಪ ವರದಿ, ಅ. 6: ರೈತಪರವಾಗಿ ಪ್ರಮುಖ 16 ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಲಕಾವೇರಿಯಿಂದ ಬೆಂಗಳೂರಿಗೆ ಬೃಹತ್ ವಾಹನ ಜಾಥಾವನ್ನು ತಾ.12 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ರೈತ ಸಂಘ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದ್ದಾರೆ.

ರೈತರ ಸಮಸ್ಯೆಯನ್ನು ಮುಖ್ಯಮಂತ್ರಿಗೆ ತಲಪಿಸುವ ನಿಟ್ಟಿನಲ್ಲಿ ಜಾಥಾ ನಡೆಸಲಾಗುತ್ತಿದ್ದು, ತಾ. 12 ರಿಂದ ತಾ. 14ವರೆಗೆ ಜಾಥಾ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾ. 14 ರಂದು ಬೆಂಗಳೂರು ಫ್ರೀಡಂ ಪಾರ್ಕ್‍ನಲ್ಲಿ ವಿಶೇಷ ಬಹಿರಂಗ ಸಭೆ ನಡೆಸಿ ಮುಖ್ಯಮಂತ್ರಿಗೆ ಸಮಸ್ಯೆ ಮುಟ್ಟಿಸುವ ಕಾರ್ಯ ನಡೆಸಲಾಗುವದು ಎಂದರು.

ತಾ. 12 ರಂದು ಬೆ. 9ಕ್ಕೆ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಜಾಥಾಕ್ಕೆ ಚಾಲನೆ ನೀಡಲಾಗುತ್ತದೆ. ಗೋಣಿಕೊಪ್ಪ ಮುಖಾಂತರ ಮೈಸೂರಿಗೆ ತೆರಳಲಾಗುವದು. ತಾ. 13 ರಂದು ಮೈಸೂರು -ಮಂಡ್ಯ ಮೂಲಕ ಚೆನ್ನಪಟ್ಟಣ ತಲಪಿ, 14 ರಂದು ಚೆನ್ನಪಟ್ಟಣದಿಂದ ಬೆಂಗಳೂರಿಗೆ ತೆರಳಲಾಗುವದು.

ಅಂದು ಮಧ್ಯಾಹ್ನ 1 ಗಂಟೆಗೆ ಫ್ರೀಡಂ ಪಾರ್ಕ್‍ನಲ್ಲಿ ಬಹಿರಂಗ ಸಭೆ ನಡೆಸಲಾಗುವದು ಎಂದರು. ದೇಶದ ಬೆನ್ನೆಲುಬು ಆಗಿರುವ ರೈತರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವೈಜ್ಞಾನಿಕ ನೀತಿಯಿಂದ ನಷ್ಟದಲ್ಲಿ ಬದುಕು ಸಾಗಿಸುವಂತೆ ಮಾಡಿದೆ. ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ. ಸುಧಾರಣೆ ಕಾಣಬೇಕಾದ ರೈತ ಸಾಲದಲ್ಲಿ ಬದುಕು ಕಳೆದುಕೊಳ್ಳುವತ್ತ ಸಾಗಲು ಸರ್ಕಾರಗಳೇ ನೇರ ಹೊಣೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಉಂಟಾದ ಭೂಕುಸಿತ ಘಟನೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವದು ಮತ್ತು ಇದರ ಕೂಲಂಕಷ ತನಿಖೆಯನ್ನು ಇಸ್ರೋ ವಿಜ್ಞಾನಿಗಳಿಂದ ಸಂಶೋಧನೆ ನಡೆಸುವದು, ಮನೆ ಕಳೆದುಕೊಂಡವರಿಗೆ ಮನೆ, ಜಾಗ ನೀಡುವದು, ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.

ಇದರೊಂದಿಗೆ ರೈತರ ಸಂಪೂರ್ಣ ಸಾಲಮನ್ನಾ, ಬಡ್ಡಿ ರಹಿತ ಸಾಲ, ಈಗಿರುವ ಬೆಳೆ ಪರಿಹಾರ ಮೊತ್ತ ಹಾಗೂ ವನ್ಯಪ್ರಾಣಿಗಳಿಂದ ನಷ್ಟ ಅನುಭವಿಸಿದ ರೈತರಿಗೆ ನೀಡುವ ಪರಿಹಾರ ಮೊತ್ತವನ್ನು 10 ಪಟ್ಟು ಹೆಚ್ಚಿಸುವದು, ಕಳ್ಳಸಾಗಣೆಯ ಕಾಳು ಮೆಣಸು ಆಮದು ತಡೆಹಿಡಿಯುವದು, ಕೊಡಗಿನ ಕೃಷಿಕರ ಬೆಳೆ ನಷ್ಟಕ್ಕೆ ಪ್ರತ್ಯೇಕ ಪರಿಹಾರ ನೀಡುವದು, ಸಹಕಾರ ಸಂಘಗಳಲ್ಲಿನ ಸಾಲದ ಮಿತಿಯನ್ನು 10 ಲಕ್ಷಕ್ಕೆ ಏರಿಸುವದು, ಸ್ಥಳೀಯ ಬೆಳೆಗಳಲ್ಲಿ ಸೆಸ್ ಪಡೆಯುವದನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ತೆಗೆಯುವದು, ಆರ್‍ಟಿಸಿಯಲ್ಲಿನ ಪೌತಿ ಖಾತೆ ಗೊಂದಲ ನಿವಾರಣೆಗೆ ವಿಶೇಷ ಯೋಜನೆ ರೂಪಿಸುವದು, ಸ್ವಾಮಿನಾಥನ್ ಯೋಜನೆ ಜಾರಿ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಈ ಸಂದರ್ಭ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ರೈತ ಸಂಘ ಜಿಲ್ಲಾ ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಶುಭಾಶ್ ಸುಬ್ಬಯ್ಯ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ಶ್ರೀಮಂಗಲ ಸಂಚಾಲಕ ಬಾಚಮಾಡ ಭವಿಕುಮಾರ್ ಉಪಸ್ಥಿತರಿದ್ದರು.