ಮಡಿಕೇರಿ, ಅ. 6: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕøತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿದರು. ವಿದ್ಯಾರ್ಥಿಗಳು ಕಲಿವಿನೊಂದಿಗೆ ಕಲೆಯನ್ನು ಕರಗತ ಮಾಡಿಕೊಂಡು ಸಂಗೀತದಲ್ಲಿ ಸಮಯ ಕಳೆಯುವದು ಉತ್ತಮ.

ಕಲಾವಿದರುಗಳನ್ನು ಯುವ ಮಿತ್ರರು ಗೌರವಿಸಬೇಕು. ಆ ಮೂಲಕ ಬದುಕಿನ ಕಡೆಗೆ ಚಿಂತನೆ ಮಾಡಬೇಕು. ತಿದ್ದಿ ಬುದ್ಧಿ ಹೇಳುವ ಉಪನ್ಯಾಸಕರ ಮಾರ್ಗದರ್ಶನ ಪಡೆಯಬೇಕು. ಹಿಂದಿನ ಇತಿಹಾಸ ಪರಂಪರೆಯನ್ನು ಅರಿಯಲು ಜಾನಪದ ಕಲೆ ಅತಿಮುಖ್ಯ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿವೃತ್ತ ಉಪನ್ಯಾಸಕ ಸಬಲಂ ಬೋಜಣ್ಣರೆಡ್ಡಿ ದಕ್ಷಿಣ ಭಾರತದಲ್ಲಿ ಜಾನಪದ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಾಚೀನ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಎಚ್.ಪಿ.ಲಿಂಗಮೂರ್ತಿ ಮಾತನಾಡಿ ವೈವಿಧ್ಯಮಯವಾದ ಕಲಾಪ್ರಕಾರಗಳು ನಮ್ಮ ದೇಶದಲ್ಲಿ ಅಡಗಿದೆ. ಪ್ರದೇಶಕ್ಕೊಂದು ಆಚಾರ ವಿಚಾರಗಳಿವೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದ ಸಂಸ್ಕøತಿ ಇಡೀ ವಿಶ್ವಕ್ಕೆ ಮಾದರಿ ಎಂದರು.

ಪ್ರಾಸ್ತಾವಿಕವಾಗಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್ ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹದೇವಪ್ಪ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಉಪನ್ಯಾಸಕ ಡಾ.ಹರ್ಷ, ವಸಂತಕುಮಾರಿ, ಕಾಶಿಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಶಾಸ್ತ್ರೀಯ ಗಾಯನ, ಶಾಸ್ತ್ರೀಯ ನೃತ್ಯ, ವಾದ್ಯ ಸಂಗೀತ, ಸುಗಮ ಸಂಗೀತ, ಜಾನಪದ ನೃತ್ಯ, ಜಾನಪದ ಗೀತಾಗಾಯನ ಕಂಸಾಳೆ, ಡೊಳ್ಳುಕುಣಿತ, ಕೋಲಾಟ ಮುಂತಾದವುಗಳು ಏರ್ಪಡಿಸಲಾಗಿತ್ತು.