ಮಡಿಕೇರಿ, ಅ. 6: ಪದವಿ ಪೂರ್ವ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಕೊಡಗು ಜಿಲ್ಲಾ ಇಕೋ ಕ್ಲಬ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಘಟಕ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಮೇಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ಹಾಗೂ ಅರಣ್ಯ ಇಲಾಖೆಯ ಅರಣ್ಯ ವಲಯಾಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ ಗುರುವಾರ ಮೇಕೇರಿ ಗ್ರಾಮದಲ್ಲಿ 65 ನೇ ವನ್ಯಜೀವಿ ಸಪ್ತಾಹ-2019 ಅಂಗವಾಗಿ ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ ಕುರಿತು ಪರಿಸರ ಜಾಗೃತಿ ನಡೆಸಲಾಯಿತು.

ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ ಕುರಿತು ಅಭಿಯಾನದಲ್ಲಿ ಮಾಹಿತಿ ನೀಡಿದ ಇಕೋ ಕ್ಲಬ್‍ನ ನೋಡಲ್ ಅಧಿಕಾರಿ ಹಾಗೂ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಪ್ರಕೃತಿಯ ಒಂದು ಪ್ರಮುಖ ಭಾಗವಾದ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆ ಮಾಡುವ ಮಹತ್ವದ ಹೊಣೆಗಾರಿಕೆ ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದರು.

ಸುಸ್ಥಿರ ಅಭಿವೃದ್ಧಿ ಎಂದರೆ ವಿನಾಶ ರಹಿತ ಅಭಿವೃದ್ಧಿಯಾಗಿದ್ದು, ನಾವು ನಮ್ಮ ಜೀವಿ ಸಂಕುಲದ ಉಳಿವಿನ ಜೊತೆಗೆ ಅಭಿವೃದ್ಧಿಯಲ್ಲಿ ತೊಡಗಬೇಕು ಎಂದರು.

ವನ್ಯ ಜೀವಿಗಳು ಮತ್ತು ಅರಣ್ಯಗಳು ನಿಸರ್ಗದ ಆಭರಣಗಳು ಇದ್ದಂತೆ, ಇವುಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ.

ವಿನಾಶದಂಚಿನತ್ತ ಸಾಗುತ್ತಿರುವ ಅರಣ್ಯ, ವನ್ಯಜೀವಿಗಳು ಮತ್ತು ಪರಿಸರವನ್ನು ಉಳಿಸುವತ್ತ ಗಮನಹರಿಸದಿದ್ದಲ್ಲಿ ಮುಂದಿನ ಪೀಳಿಗೆಗೆ ಇವುಗಳನ್ನು ನೋಡುವ ಅವಕಾಶ ಇಲ್ಲದಂತಾಗುತ್ತದೆ. ಆದ್ದರಿಂದ ಅರಣ್ಯ ಮತ್ತು ವನ್ಯ ಜೀವಿಗಳ ಉಳಿಸಿ ಬೆಳೆಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರೇಮಕುಮಾರ್ ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ್ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಎಂ.ಬಿ. ಕುಸುಮಾವತಿ, ವಿದ್ಯಾರ್ಥಿ ಗಳು ತಮ್ಮ ಅರಣ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಡಿಆರ್‍ಎಫ್‍ಒ ಬಾಬು ರಾಥೋಡ್, ಪ್ರಭಾರ ಗಾರ್ಡ್ ವಾಸುದೇವ್, ಎಸ್‍ಡಿಎಂಸಿ ಅಧ್ಯಕ್ಷ ರಫೀಕ್‍ಖಾನ್, ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಬಿ.ಡಿ. ರವೀಶ್, ಉಪನ್ಯಾಸಕರಾದ ಎಸ್. ನಂದೀಶ್, ರಾಜಸುಂದರಂ, ಹೆಬ್ಬಾಲೆ ನಮ್ರತ್, ಶಿಕ್ಷಕರಾದ ಹೆಚ್.ಎ. ಪ್ರಸನ್ನ ಕುಮಾರ್, ಕೆ.ಎಂ. ಸಬಿತಾ, ಸಿ. ಪುಷ್ಪ, ಶ್ರೀಲತಾ, ಸಿಬ್ಬಂದಿಗಳಾದ ಎ.ಪಿ. ಸುಧಾ, ಮಂದಪ್ಪ ಇದ್ದರು. ನಂತರ ಶಿಬಿರಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸುವ ಮೂಲಕ ಅರಣ್ಯ, ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.