ಮಡಿಕೇರಿ, ಅ. 6: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಕುಪ್ಪಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹಾಗೂ ಕನ್ನಡ ಸಂಘ ಮಹಿಳಾ ಕಾಲೇಜಿನ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ವರದರಾಜ ಚಂದ್ರಗಿರಿ ಅವರು ಮಾತನಾಡಿ ಕುವೆಂಪು ಮೂಲತಃ ಯಾವುದೇ ಸಿದ್ಧ ಸಂಪ್ರದಾಯಕ್ಕೆ ಸೇರದವರಾಗಿದ್ದರೂ, ಈ ದೇಶದ ಸಾಹಿತ್ಯಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಮೈಗೂಡಿಸಿಕೊಂಡು ಅದನ್ನು ತಮ್ಮ ಕಾಲ ಧರ್ಮದ ಸಂದರ್ಭದಲ್ಲಿ ಪುನರ್ ವ್ಯಾಖ್ಯಾನಿಸುವ ಕ್ರಮ ವಿಶೇಷ ರೀತಿಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಲೆನಾಡಿನಲ್ಲಿ ಹುಟ್ಟಿದ ಕವಿ ಕುವೆಂಪು ಅವರು ಮೈಸೂರಿನಲ್ಲಿ ತಮ್ಮ ಬದುಕನ್ನು ಸಾಗಿಸಿ ದೇಶ, ಭಾಷೆ, ಜಾತಿ, ಮತ, ಸಿದ್ಧಾಂತಗಳ ಹಾಗೂ ತಮಗೆ ಅತ್ಯಂತ ಪ್ರಿಯವಾದ ಸಾಹಿತ್ಯದ ಮೇರೆಯನ್ನು ದಾಟಿತ್ತು. ವಿಶ್ವದೃಷ್ಟಿಯನ್ನು ಹೊಂದಿತ್ತು. ಅದರ ಫಲವೇ ವಿಶ್ವಮಾನವ ಸಂದೇಶ. ‘ಮನುಜ ಮತ-ವಿಶ್ವಪಥ’ ಕುವೆಂಪು ಅವರ ನಿಲುವಾಗಿತ್ತು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಿ.ಜೆ.ಜವರಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ.ರಾಜಶೇಖರ ಹಳೆಮನೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕು.ರೇಷ್ಮಾ ಮತ್ತು ತಂಡ ರೈತ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕರಾದ ಡಾ.ಸರಸ್ವತಿ ಡಿ.ಕೆ ಅವರು ಸ್ವಾಗತಿಸಿದರು. ಐಶ್ವರ್ಯ ಅವರು ನಿರೂಪಿಸಿದರು. ಕವಿತಾ ವಂದಿಸಿದರು. ಪ್ರಾಧ್ಯಾಪಕ ವೃಂದ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.