ಮಡಿಕೇರಿ, ಅ. 6: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವರ್ಷಂಪ್ರತಿಯಂತೆ ವಿಜಯ ದಶಮಿ ಪ್ರಯುಕ್ತ ಇಂದು ನಗರದಲ್ಲಿ ಪಥ ಸಂಚಲನ ನಡೆಯಿತು. ಇಲ್ಲಿನ ಸರಕಾರಿ ಪ.ಪೂ. ಕಾಲೇಜು ಆವರಣದಿಂದ ನೂರಾರು ಗಣವೇಷಧಾರಿ ಸ್ವಯಂಸೇವಕರು ನಗರದ ಮುಖ್ಯ ಬೀದಿಗಳಲ್ಲಿ ಹೆಜ್ಜೆಗೆ ಹೆಜ್ಜೆಗೂಡಿ ಸಾಗಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡ್ಗೇವರ್ ಹಾಗೂ ಮಾಧವ ಸದಾಶಿವ ಗೋಳ್ವಳ್‍ಕರ್ ಅವರುಗಳ ಭಾವಚಿತ್ರ ಸಹಿತ ಭಗವಾಧ್ವಜ (ಮೊದಲ ಪುಟದಿಂದ) ಮುಂಚೂಣಿಯಲ್ಲಿದ್ದು; ಘೋಷ್ ವಾದ್ಯದೊಂದಿಗೆ ಸಂಚಲನ ಸಾಗಿತು. ಶಾಸಕತ್ರಯರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ ಸೇರಿದಂತೆ ಸಂಘದ ಹಿರಿಯ ಮತ್ತು ಕಿರಿಯ ಸ್ವಯಂಸೇವಕರು ಪಾಲ್ಗೊಂಡಿದ್ದರು.ನಗರದ ಪಂಜೆಮಂಗೇಶರಾಯ ರಸ್ತೆ, ಇಂದಿರಾ ಗಾಂಧಿ ವೃತ್ತ, ಗಣಪತಿ ಬೀದಿ, ಮಹದೇವಪೇಟೆ, ಕಾಲೇಜು ರಸ್ತೆ, ಕೊಹಿನೂರು ರಸ್ತೆಗಾಗಿ ಬಸ್ ನಿಲ್ದಾಣದ ಮುಖಾಂತರ ಮರಳಿ ಸರಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಕಾರ್ಯಕ್ರಮ ಮುಕ್ತಾಯಗೊಂಡಿತು.ಸಂಘದ ಪ್ರಮುಖರಾದ ಡಿ.ಕೆ. ಡಾಲಿ, ಚಂದ್ರಉಡೋತ್, ಅರುಣ್‍ಕುಮಾರ್, ಮಹೇಶ್‍ಕುಮಾರ್ ಪ್ರಚಾರಕ್ ಶ್ರೀನಿಧಿ ಸೇರಿದಂತೆ 700ಕ್ಕೂ ಅಧಿಕ ಸ್ವಯಂ ಸೇವಕರು ಪಾಲ್ಗೊಂಡಿದ್ದರು.