ಸೋಮವಾರಪೇಟೆ, ಅ. 6: ಇಲ್ಲಿನ ಬಸವೇಶ್ವರ ರಸ್ತೆಯ ನಿವಾಸಿ, ಕಾಫಿ ಬೆಳೆಗಾರರಾದ ವಿಕಾಸ ರತ್ನ ಎ.ಪಿ. ಶಂಕರಪ್ಪ ಹಾಗೂ ಶಾರದಮ್ಮ ದಂಪತಿಗಳು ತಮ್ಮ ಮನೆಯಲ್ಲಿ ನವದುರ್ಗಾದೇವಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಿದ್ದು, ದೇವಾಲಯಗಳಲ್ಲಿ ನಡೆಯುವಂತೆಯೇ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ನವರಾತ್ರಿ ಸಂದರ್ಭ ನವ ದುರ್ಗಾದೇವಿಯರ ಮೂರ್ತಿಗಳನ್ನು ಆರಾಧಿಸುತ್ತಾ ಬರುತ್ತಿರುವ ಇವರು, ಈ ಬಾರಿ ತಮ್ಮ ವೈವಾಹಿಕ ಜೀವನದ 61ರ ಸಂಭ್ರಮದಲ್ಲಿದ್ದಾರೆ.
ಕಳೆದ ಒಂದು ವಾರದಿಂದ ತಮ್ಮ ಮನೆಯ ವಿಶಾಲ ಮಂಟಪದಲ್ಲಿ ಶೈಲಾಪುತ್ರಿ, ಬ್ರಹ್ಮಚಾರಿಣಿ, ಚಂದ್ರ ಘಂಟಾದೇವಿ, ಕೂಷ್ಮಾಂಡದೇವಿ, ಸ್ಕಂಧಮಾತೆ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ, ಸಿದ್ದಿಧಾತ್ರಿ ದೇವಿಯರ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ ಪ್ರತಿನಿತ್ಯ ಪೂಜಿಸುತ್ತಿದ್ದಾರೆ. ವಿಜಯದಶಮಿಯಂದು ಮುತ್ತೈದೆಯರ ಸಮ್ಮುಖ ವಿಶೇಷ ಪೂಜೆ ಸಲ್ಲಿಸುತ್ತಾರೆ.