*ಗೋಣಿಕೊಪ್ಪಲು, ಅ. 6: ವಿವಿಧ ತರಕಾರಿ, ಸೊಪ್ಪು, ಹಣ್ಣುಗಳು, ತಿಂಡಿಗಳ ಮಾರಾಟ. ವಿಜ್ಞಾನ ವಸ್ತು ಪ್ರದರ್ಶನ ಗೋಣಿಚೀಲ ಓಟ, ಜಾನಪದ ಗೀತೆ ಮತ್ತು ನೃತ್ಯ, ಚಿತ್ರ ಕಲೆ, ಛದ್ಮವೇಶ, ಭರತ ನಾಟ್ಯ ಹೀಗೆ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದ ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಮಕ್ಕಳ ದಸರಾಕ್ಕೆ ಮೆರುಗನ್ನು ತಂದುಕೊಟ್ಟರು.

ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನ ಮಾದರಿ ವಸ್ತುಗಳನ್ನು ಪ್ರದರ್ಶಿಸಿ ಬೆರಗುಗೊಳಿಸಿದರೆ ಇತರ ವಿದ್ಯಾರ್ಥಿಗಳು ವ್ಯಾಪಾರದ ಕೌಶಲ್ಯತೆಯನ್ನು ಅರಿತುಕೊಳ್ಳಲು ತರಕಾರಿ, ಸೊಪ್ಪು, ಹಣ್ಣು, ತಿಂಡಿ ತಂಪು ಪಾನಿಯಗಳನ್ನು ಮಾರಾಟ ಮಾಡಿದರು. ಉಳಿದ ವಿದ್ಯಾರ್ಥಿಗಳು ಚಿತ್ರ ಕಲೆಯಲ್ಲಿ ತಮ್ಮ ಪ್ರದರ್ಶನ ತೋರಿದರೆ ಇನ್ನುಳಿದವರು ಭರತ ನಾಟ್ಯ, ಜಾನಪದ ಗೀತೆ ಮತ್ತು ನೃತ್ಯ ಮತ್ತು ಛದ್ಮ ವೇಷಗಳಲ್ಲಿ ಭಾಗವಹಿಸಿ ಕಲೆ ಮತ್ತು ಸಂಸ್ಕøತಿಯನ್ನು ಬಿಂಬಿಸಿದರು.

ವಿದ್ಯಾರ್ಥಿನಿ ಜೀವಿತಾ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೈಲ ಚಾಲನೆ ನೀಡಿದರು.

ವಿಜ್ಞಾನ ವಸ್ತು ಪ್ರದರ್ಶನವನ್ನು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜೆ ರಾಮಕೃಷ್ಣ ಹಾಗೂ ಸಂತೆಯನ್ನು ಕಾರ್ಯದರ್ಶಿ ಜಿಮ್ಮಾ ಸುಬ್ಬಯ್ಯ ಉದ್ಘಾಟಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ಸೆಲ್ವಿ, ಸದಸ್ಯ ರಾಜಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ನೂರೆರ ರತಿ ಅಚ್ಚಪ್ಪ ಮಕ್ಕಳ ದಸರಾ ಸಂಚಾಲಕರಾದ ವಾಮನ, ಮಹೇಶ್, ಕಾವೇರಿ ದಸರಾ ಸಮಿತಿ ಖಜಾಂಜಿ ಗಾಂಧಿ ದೇವಯ್ಯ ಹಾಜರಿದ್ದರು.