ಮಡಿಕೇರಿ, ಅ. 5: ಪರಿಶುದ್ದವಾದ ವಿಜ್ಞಾನ ಕಲಿಕೆಯನ್ನು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಿ ವಿಜ್ಞಾನ ಲೋಕದ ಆಗುಹೋಗುಗಳ ಬಗ್ಗೆ ಅರಿವು ಮೂಡಿಸಿದ್ದೇ ಆದಲ್ಲಿ ಜಗತ್ತಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗುತ್ತದೆ ಎಂದು ರಾಜ್ಯ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಅವಲೋಕನ ಹೆಸರಿನ ವಿಜ್ಞಾನ ಮೇಳಕ್ಕೆ ಪ್ರಾಯೋಗಿಕವಾಗಿ ವಿಜ್ಞಾನ ಮಾದರಿಯನ್ನು ಪ್ರಯೋಗಿಸುವ ಮೂಲಕ ವಿಭಿನ್ನವಾಗಿ ಚಾಲನೆಯನ್ನು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿದರು. ಈ ಸಂದರ್ಭ ಮಾತನಾಡಿದ ಸಚಿವರು, ಸಾಧಿಸುವ ಕಿಚ್ಚು ಮತ್ತು ಕೆಚ್ಚು ಇದ್ದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.ಕೊಡಗಿನ ಬಗ್ಗೆ ನನಗೆ ಒಂದು ಭಾವನಾತ್ಮಕ ಸಂಬಂಧ ಇದೆ. ಬೆಂಗಳೂರಿನ ಜನರು ಕೊಡಗಿಗೆ ಬಹಳ ಕೃತಜ್ಞತೆ ಸಲ್ಲಿಸಬೇಕು ಎಂದರು. ಇತ್ತೀಚೆಗೆ ವಿದ್ಯಾಸಂಸ್ಥೆಯನ್ನು ನಡೆಸುವದು ಒಂದು ವ್ಯಾಪಾರವಾಗಿದೆ. ಆದರೆ ಈ ಸಂಸ್ಥೆಯು ಸೇವಾಮ ನೋಭಾವದಿಂದ ಸಂಸ್ಥೆಯನ್ನು ನಡೆಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮಾಡುವ ಬದಲು ಸಂಶೋಧನಾ ಜಗತ್ತಿಗೆ ಕಾಲಿಟ್ಟು ವಿಜ್ಞಾನಿಗಳಾಗಿ ಸಮಾಜದ ಅನೇಕ ಸಮಸ್ಯೆಗಳನ್ನು ಬಗೆಹರಿಸುವಂತೆ ಸಲಹೆಯಿತ್ತರು. ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಪಿ. ಉತ್ತಪ್ಪ ಮಾತನಾಡಿ, ಕೊಡಗಿನ ಮಣ್ಣು ಸ್ವರ್ಗವಿದ್ದಂತೆ. ಇಲ್ಲಿನ ನದಿ, ಗುಡ್ಡಗಳು ದೇವಾಲಯದಂತೆ. ಇವುಗಳನ್ನು ನಾವು ಪೂಜಿಸಬೇಕೇ ಹೊರತು, ನಾಶಮಾಡಬಾರದು ಎಂದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅಧ್ಯಕ್ಷ ಕೆ.ಪಿ.ಉತ್ತಪ್ಪ, ಪ್ರಾಂಶುಪಾಲೆ ವಿದ್ಯಾಹರೀಶ್, ಭಾರತೀಯ ವಿದ್ಯಾಭವನದ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್.ದೇವಯ್ಯ, ಕಾರ್ಯದರ್ಶಿ ಬಾಲಾಜಿಕಶ್ಯಪ್, ಜಿಲ್ಲಾ ಶಿಕ್ಷಣಾಧಿಕಾರಿ ಮಚ್ಚಾಡೋ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ರವಿ ಪಾಲ್ಗೊಂಡಿದ್ದರು.

ವಿದ್ಯಾಸಂಸ್ಥೆಯ ಶಾಲಾ ವಿದ್ಯಾರ್ಥಿಗಳು ಅವಲೋಕನ ವಿಜ್ಞಾನ ಮೇಳದಲ್ಲಿ ವಿಭಿನ್ನ ರೀತಿಯ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಪುಟ್ಟ ಮಕ್ಕಳೂ ಅನೇಕ ಮಾದರಿಗಳ ವಿಜ್ಞಾನ ಪ್ರಯೋಗವನ್ನು ಸಚಿವರ ಮುಂದೆ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾದರು. ನೂರಾರು ರೀತಿಯ ವಿಜ್ಞಾನ ಮಾದರಿಗಳು ಅವಕೋಕನ ವಿಜ್ಞಾನ ಮೇಳದ ವಿಶೇಷತೆಯಾಗಿತ್ತು.