ಮಡಿಕೇರಿ, ಅ. 5 : ರಾಜ್ಯ ಸರಕಾರದ ಆದೇಶದಂತೆ ಕೊಡಗು ಜಿಲ್ಲೆಯ ಮೂರು ತಾಲೂಕುಗಳನ್ನು ನೆರೆ ಬಾದಿತ ಪ್ರದೇಶವೆಂದು ಘೋಷಿಸಿದ್ದು, ಈ ಮೂರು ತಾಲೂಕಿನ ನೆರೆ ಬಾಧಿತ ಪ್ರದೇಶಗಳ ಸಾರ್ವಜನಿಕರು ಬ್ಯಾಂಕುಗಳಲ್ಲಿ ಪಡೆದಿರುವ ಸಾಲಗಳ ಪುನರ್‍ರಚನೆ ಅಥವಾ ಮರು ಪಾವತಿಸಬೇಕಾಗಿರುವ ಕಂತುಗಳ ಮುಂದೂಡಿಕೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಮತ್ತು ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯಿಂದ ರಚಿಸಿ ಆದೇಶಿಸಲಾಗಿದೆ.

ಈ ಮಾರ್ಗಸೂಚಿಗಳನ್ವಯ ನೆರೆ ಬಾಧಿತ ಪ್ರದೇಶಗಳಲ್ಲಿ ಬರುವ ಸಾರ್ವಜನಿಕರು ಬ್ಯಾಂಕ್‍ಗಳಲ್ಲಿ ತೆಗೆದುಕೊಂಡಿರುವ ಸಾಲಗಳು ಚಾಲ್ತಿಯಲ್ಲಿರಬೇಕು. ಆದರೆ, ಪಡೆದ ಸಾಲವು ಅನುತ್ಪಾದಕ ಸ್ಥಿತಿಯಲ್ಲಿ ಅಥವಾ ಸುಸ್ತಿದಾರರಾಗಿರಬಾರದು. ಚಾಲ್ತಿಯಲ್ಲಿರುವ ತೆಗೆದುಕೊಂಡ ಸಾಲದ ಪುನರ್‍ರಚನೆ ಅಥವಾ ಕಂತುಗಳನ್ನು ಮುಂದೂಡುವದರ ಜೊತೆ ಬೆಳೆದಿರುವ ಪ್ರಸ್ತುತ ಬೆಳೆಗಳಿಗೆ ಎಕರೆವಾರು ನಿಗದಿಪಡಿಸಿರುವಂತೆ ಹೆಚ್ಚಿನ ಸಾಲ ಸೌಲಭ್ಯ ರೈತರು ಪಡೆಯಬಹುದಾಗಿದೆ.

ಜಿಲ್ಲೆಯಲ್ಲಿ 2019-20ರ ಸಾಲಿನ ಪ್ರಕೃತಿ ವಿಕೋಪದಿಂದ ಬಾಧಿತವಾದ ಗ್ರಾಮ ಪಂಚಾಯಿತಿ, ಗ್ರಾಮಗಳಲ್ಲಿ ಶೇ. 33ಕ್ಕಿಂತ ಹೆಚ್ಚಿಗೆ ಬೆಳೆ ಹಾನಿಯಾದ ರೈತರು ಮಾತ್ರ ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ. ಸರ್ಕಾರದಿಂದ ಅದಿಸೂಚಿಸಿದಂತೆ ಬಾಧಿತವಾದ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಗಳ ವಿವರವನ್ನು ಕೊಡಗು ಜಿಲ್ಲಾ ವೆಬ್‍ಸೈಟ್hಣಣಠಿs://ಞoಜಚಿgu.ಟಿiಛಿ.iಟಿನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ.

ಈ ಅವಕಾಶ ಪಡೆಯಲಿಚ್ಚಿಸುವ ಸಾರ್ವಜನಿಕರು ಅಥವಾ ರೈತರು ನಿಗದಿತ ನಮೂನೆಯಲ್ಲಿ ಒಪ್ಪಿಗೆ ಪತ್ರವನ್ನು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕು. ಒಪ್ಪಿಗೆ ಪತ್ರದ ನಮೂನೆಗಳು ಆಯಾ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿದ್ದು, ವ್ಯವಸ್ಥಾಪಕರಿಂದ ಪಡೆದು ಭರ್ತಿ ಮಾಡಿ ನೀಡಬಹುದಾಗಿದೆ.

ಈ ಹೊಸ ಮಾರ್ಗಸೂಚಿಗಳು ರಾಷ್ಟ್ರೀಕೃತ, ಖಾಸಗಿ, ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್‍ಗಳಿಗೆ ಅನ್ವಯ ವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವ್ಯವಹರಿಸುತ್ತಿರುವ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು. ಆದ್ದರಿಂದ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.