ಟಿಪ್ಪರ್-ಕಾರು ಸಹಿತ ಕ್ರಮ
ಮಡಿಕೇರಿ, ಅ. 5: ಗೋಣಿಕೊಪ್ಪಲು ಮಾರ್ಗವಾಗಿ ವೀರಾಜಪೇಟೆಯ ದಖ್ಖನಿಮೊಹಲ್ಲಾಕ್ಕೆ ಅಕ್ರಮ ಮರಳು ಸಾಗಿಸಿ ದಾಸ್ತಾನುಗೊಳಿಸುತ್ತಿದ್ದ ಕೃತ್ಯವೊಂದನ್ನು ವೀರಾಜಪೇಟೆ ನಗರ ಠಾಣಾ ಪೊಲೀಸರು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಿದ್ದಾರೆ. ಅಲ್ಲಿನ ಚಿಕ್ಕಪೇಟೆಯ ಮೈಕ್ರೋ ಬಡಾವಣೆ ನಿವಾಸಿ ಸಚೀಂದ್ರ ಎಂಬವರಿಗೆ ಸೇರಿದ ಟಿಪ್ಪರ್ (ಕೆಎ 12 ಎ 7995)ನಲ್ಲಿ ಚಾಲಕ ರಂಜಿತ್ ಇಂದು ಬೆಳಗ್ಗಿನ ಜಾವ 3.45ರ ಸುಮಾರಿಗೆ ದಖ್ಖನಿಮೊಹಲ್ಲಾದಲ್ಲಿ ಅಕ್ರಮವಾಗಿ ಮರಳು ತಂದಿರಿಸುವ ವೇಳೆ ಸೆರೆಯಾಗಿದ್ದಾನೆ.
ಈ ಸಂಬಂಧ ಕಾರೊಂದನ್ನು (ಕೆಎ 01 ಎಂಎ 2549) ವಶಕ್ಕೆ ಪಡೆದಿರುವ ಪೊಲೀಸರು ಚಾಲಕ ಪೈಜಾನ್ ಎಂಬಾತನನ್ನು ಕೂಡ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಚೀಂದ್ರ ತಲೆಮರೆಸಿಕೊಂಡಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಮರಿಸ್ವಾಮಿ, ಸಹಾಯಕ ಠಾಣಾಧಿಕಾರಿ ಮಾದಯ್ಯ, ಸಿಬ್ಬಂದಿಗಳಾದ ಸುನಿಲ್, ಲೋಕೇಶ್, ಗಿರೀಶ್, ಯೋಗೇಶ್ ಪಾಲ್ಗೊಂಡಿದ್ದರು.